ದಾರಿ ದೀಪ : ತಾಳ್ಮೆ ಇದ್ದರೆ ಗೆದ್ದೆ – ಇಲ್ಲದಿದ್ದರೆ ಬಿದ್ದೆ

ಜಗತ್ತಿನ ಅತೀ ದೊಡ್ಡ ಪ್ರಾರ್ಥನೆ ತಾಳ್ಮೆ

ನಮ್ಮ ಜೀವನ ಅವಸರದ ಹೆಜ್ಜೆಯ ಮೇಲೆ ಸಾಗುತ್ತಿದೆ. ಇಂದಿನ ದಾರಿಯಲ್ಲಿ ನರನಾಡಿಗಳಲ್ಲಿನ ಗಡಿಬಿಡಿಯ ತಕಧಿಮಿತ ಹೇಳತೀರದು. ಪರೀಕ್ಷೆ ಬರೆದವನಿಗೆ ಬೇಗ ಅಂಕ ಬರಬೇಕೆಂಬ ನಿರೀಕ್ಷೆ, ಪಾಠ ಮಾಡುವ ಶಿಕ್ಷಕನಿಗೆ ಒಮ್ಮೆ ಪಾಠ ಮುಗಿಸಿ ಬಿಡುವ ಧಾವಂತ. ಬಂಡವಾಳ ಹೂಡಿಕೆ ಮಾಡಿ ಕಂಪನಿ ನಿರ್ಮಾಣ ಮಾಡಿದವನಿಗೆ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಲಾಭ ಬರಬೇಕೆಂಬ ಹೆಬ್ಬಯಕೆ. ಬ್ಯಾಂಕಿನಲ್ಲಿ ಉಳಿತಾಯ ಮಾಡಿದವನಿಗೆ ಲಾಭಾಂಶ ತ್ವರಿತಗತಿಯಲ್ಲಿ ದೊರಕಲೆಂಬ ಕನವರಿಕೆ. ಮನೆ ಕಟ್ಟಲು ಇಳಿದರೆ ಮನೆ ಮುಗಿಸುವ ಆತುರ. ಬಾವಿ ತೋಡಲು ಪ್ರಾರಂಭಿಸಿದರೆ ಬೇಗ ನೀರು ಸಿಗಲೆಂಬ ಕಾತುರ. ಅಂತು ಏನೇ ಮುಟ್ಟಿದರೂ ಅದು ಬೇಗ ಸಿದ್ದಿಸಲಿ ಎಂಬ ತ್ವರಿತ ಬುದ್ದಿ. ಹುಟ್ಟಿದ ಮಗುವಿನಿಂದಲೇ ಅವಸರ ಪ್ರಾರಂಭ. ಹುಟ್ಟೋ ಮುನ್ನವೇ ಬಯಕೆಗಳ ಪಟ್ಟಿ ಮನದ ಗೋಡೆಯನ್ನು ಅಲಂಕರಿಸಿ ಬಿಡುತ್ತದೆ. ಕನಸುಗಳ ಹೇರಿಕೆಯ ಬಿರುಸು ಬಾಣಗಳು ಎಳೆಯ ಕಂದಮ್ಮಗಳನ್ನು ಚುಚ್ಚಲು ಪ್ರಾರಂಭಿಸುತ್ತವೆ.
ಮನೆಯಲ್ಲಿ ಗಂಡ ಕೇಳಿದನ್ನು ಕೊಡದಿದ್ದರೆ ಉಮ್ಮಳಿಸುವ ಹೆಂಡತಿಯ ಸಿಟ್ಟು. ಗಂಡನಿಗೆ, ಹೆಂಡತಿ ತನ್ನ ಮಾತು ನಿರಾಕರಿಸಿದರೆ ಮುನಿಸು. ಮಕ್ಕಳಿಗೆ ಅಪ್ಪ ಅಮ್ಮ ಕೇಳಿದನ್ನು ಕೊಡಲಿಲ್ಲ ಎಂದು ಗರ್ವ. ನನ್ನ ಮಾತು ಕೇಳಲಿಲ್ಲ ಎಂಬ ಸಂಬಂಧಿಗಳ ಕಿನಿಸು (ರೇಗಾಟ). ಸಂಸಾರದಲ್ಲಿ ಸಂಬಂಧ ಹಳಸಿತು ಎಂದು ಕಳಚುವ ಪ್ರಕರಣಗಳಿಗೆ ಕಡಿಮೆಯಿಲ್ಲ, ಮಗ-ಮಗಳು ದಾರಿ ತಪ್ಪಿದಕ್ಕೆ, ಮೊಬೈಲ್ ಕೊಡದಕ್ಕೆ, ಅವಮಾನಗೊಂಡದಕ್ಕೆ, ಅಪಮಾನವಾದುದಕ್ಕೆ ಕನಸು ಕೈಗೂಡದಕ್ಕೆ, ಸರಿಯಾದ ಉದ್ಯೋಗ ಸಿಗದಕ್ಕೆ, ಉದ್ಯೋಗ ಸಿಕ್ಕಿದರೆ ಅಲ್ಲಿನ ಒತ್ತಡಕ್ಕೆ, ಕಲಿತರೂ ಸಮಾಜ ಗೌರವಿಸದಕ್ಕೆ, ವಿದ್ಯಾಭ್ಯಾಸವಿಲ್ಲದಕ್ಕೆ, ಬದುಕಿನಲ್ಲಿ ನೆಮ್ಮದಿ ಕಳಕೊಂಡದಕ್ಕೆ, ಸಾಲ ಮಾಡಿಕೊಂಡವರ, ಸಾಲ ನೀಡಿದವರ ಪರದಾಟಕ್ಕೆ, ನಮ್ಮ ಪ್ರೇಮಕ್ಕೆ ಕುಟುಂಬ/ಸಮಾಜ ಅಡ್ಡವಾಗುತ್ತಿದೆ ಎನ್ನುವ ಜೋಡಿಗಳ ಸಂಕಟಕ್ಕೆ, ಅವರು ಬೆಳೆದರೂ ನಾನು ಬೆಳೆಯದೆ ಹೋದೆನಲ್ಲ ಚಿಂತೆ ಕಾಡಿದಕ್ಕೆ, ರೋಗ ಬಂದುದಕ್ಕೆ, ಆಪ್ತರ ಕಳಕೊಂಡದಕ್ಕೆ, ಏಕಾಂತದ ವಿಛಿದ್ರಕ್ಕೆ, ಅಧಿಕಾರದ ವ್ಯಾಮೋಹಕ್ಕೆ, ಅಹಂಕಾರದ ದರ್ಪಕ್ಕೆ, ಸ್ವಾರ್ಥದ ಕಿಚ್ಚಿಗೆ ಬಲಿಯಾಗುವ ಮನಸ್ಥಿತಿಗೆ ಅಬ್ಬಾ ಒಂದೇ ಎರಡೇ ಇಂತಹ ಸಾಲು ಸಾಲು ಕಾರಣಗಳು ಬದುಕಿನ ಅಂತ್ಯಕ್ಕೆ ನಾಂದಿ ಆಗುತ್ತಿವೆ. ಹೀಗೆ ತಾಳ್ಮೆ ಕಳಕೊಂಡವರ ಅದ್ವಾನ ಒಂದೆರಡಲ್ಲ.
ಈ ಸಂಬಂಧಗಳ ಶೀತಲ ಸಮರವು ಮುಸುಕಿನ ಗುದ್ದಾಟದಿ ವಾಗ್ವಾದಕ್ಕೆ ಎಡೆಮಾಡಿಕೊಟ್ಟು ರಾದ್ಧಾಂತವನ್ನು ತಂದುಹಾಕುತ್ತಿದೆ. ಒಂದಿನಿತು ತಾಳ್ಮೆ ಇರದೆ ಸಿಟ್ಟು ಮಾಡಿಕೊಂಡು ಎಲ್ಲರನು ದೂಷಿಸುತ್ತೇವೆ, ಮುನಿಸಿಕೊಂಡು ಅನುಬಂಧ ಹಾಳು ಮಾಡಿಕೊಳ್ಳುತ್ತೇವೆ. ಮುಂದೆ ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇವೆ. ಈ ಮೂಲಕ ನಮ್ಮ ಮಾನಸಿಕ ಮನಸ್ಥಿತಿ ಕ್ಷಣಿಕತೆಯಲ್ಲಿ ವ್ಯಯಿಸಿ ವ್ಯಾಕುಲರಾಗುತ್ತೇವೆ.
ಅವಸರದ ಕೆಲ ನಿರ್ಧಾರ, ಮಾತು, ವರ್ತನೆಗಳು ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುತ್ತವೆ ಎಂಬ ಈ ಅಲ್ಪಜ್ಞಾನವು ಇರುವುದಿಲ್ಲ. ಅನಂತರ ವಿಷಾಧತೆಯನ್ನು ವ್ಯಕ್ತ ಪಡಿಸಿದರೂ, ಹೊಡೆದ ಗಾಯ ಮಾಸಿದರೂ ಮನಸಿಗೆ ನಾಟಿದ ಮಾತಿನ ಗಾಯ ಎಂದೂ ಗುಣವಾಗದು.
ನಾವಿಂದು ಅರ್ಥಮಾಡಿಕೊಳ್ಳಬೇಕಿದೆ ತಾಳ್ಮೆ ಕಳಕೊಂಡವನ ಬಾಳು ಅದು ಗೋಳೆಂದು. ಬಲ್ಬ್ ಕಂಡು ಹಿಡಿದ ಥಾಮಸ್ ಆಲ್ವಾ ಎಡಿಸನ್ಗೆ ಸಾವಿರ ಸಾರಿ ಸೋತಾಗಲೂ ಮತ್ತೊಮ್ಮೆ ಪ್ರಯತ್ನಿಸುವ ಛಲದ ಹಿಂದಿನ ಶಕ್ತಿ ಇದ್ದದ್ದು ತಾಳ್ಮೆಯಿಂದ. ಅಮೇರಿಕಾದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡ ಅಬ್ರಾಹಂ ಲಿಂಕನ್ ಹಲವು ಬಾರಿ ಚುನಾವಣೆಯಲ್ಲಿ ಸೋತಾಗಲೂ ಮತ್ತೆ ಸ್ಪರ್ಧಿಸುವಂತಹ ಮನೋಭಾವ ಹೊಂದಿಸಿದ್ದು ತಾಳ್ಮೆಯಿಂದ. ಭಾರತ ಕಂಡ ಶ್ರೇಷ್ಟ ಇಂಜಿನಿಯರ್ ಆದ ಸರ್.ಎಂ. ವಿಶ್ವೇಶ್ವರಯ್ಯರ ಅಮೋಘ ಸಾಧನೆಯ ಯುಕ್ತಿಯೇ ತಾಳ್ಮೆಯಿಂದ, ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಒಡೆಯ ವಿಜಯ ಸಂಕೇಶ್ವರರು ಸರ್ವಶ್ರೇಷ್ಟ ಉದ್ಯಮಿಯೆನಿಸಿಕೊಂಡದ್ದು ಸಹನೆಯೆಂಬ ಮಂತ್ರದಂಡದಿಂದ. ಕ್ರಿಕೇಟ್ ಲೋಕದ ದಂತಕತೆ ಸಚಿನ್ ತೆಂಡುಲ್ಕರ್ ಮಾತ್ರಿಕತೆಯ ಹಿಂದಿನ ಭಕ್ತಿ ಸಮಾಧಾನ ಚಿತ್ತವಾಗಿದೆ, ಮಹೇಂದ್ರ ಸಿಂಗ್ ಧೋನಿಯ ನಾಯಕತ್ವಕ್ಕೆ ಇಡೀ ರಾಷ್ಟದಲ್ಲಿ ಗೌರವಸಿಕ್ಕಿದ್ದು ಅವರ ಅದಮ್ಯ ಸಹನೆಯ ಮನೋಭಾವದಿಂದ. ಚಂದ್ರಯಾನ-ಮಂಗಳಯಾನದಂತಹ ಮಹತ್ವಾಕಾಂಕ್ಷಿ ಯೋಜನೆಗಳು ಕೆಲವೊಮ್ಮೆ ತಾಂತ್ರಿಕ ಅಡಚನೆಗೆ ಒಳಗಾಗಿ ಸೋಲಾದಾಗಲೂ, ನಮ್ಮ ವಿಜ್ಞಾನಿಗಳು ಪಟ್ಟು ಬಿಡದೆ ಮತ್ತೆ ಪ್ರಯತ್ನ ಶೀಲರಾಗಿರುವುದು ತಾಳ್ಮೆಯಿಂದ. ರಾಜಮಹಾರಾಜರ ಏಳಿಗೆ – ಸೋಲಿಗೆ ತಾಳ್ಮೆಯ ಅಸ್ತ್ರ – ಶಸ್ತ್ರದ ದಂಡಗಳೇ ಕಾರಣವಾಗಿದೆ ಎಂಬುದು ಐತಿಹಾಸಿಕ ಸಂಗತಿ. ಎಷ್ಟೋ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುತ್ತಾರೆ. ಹಲವಾರು ಬಾರಿ ಸೋತರೂ ಮತ್ತೆ ಅವರು ಪ್ರಯತ್ನ ಶೀಲರಾಗುತ್ತಾರೆ. ಇಂತವರನ್ನು ನಮ್ಮ ಆದರ್ಶನ್ನಾಗಿ ಸ್ವೀಕರಿಸಬೇಕಿದೆ.
ಕನಸಕದಾಸರು ತಲ್ಲಣಿಸದಿರು ಕಂಡ್ಯಾ ತಾಳು ಮನವೇ ಎಂದರೇ, ವಾದಿರಾಜರು ತಾಳುವಿಕೆಗಿಂತ ಅನ್ಯ ತಪವಿಲ್ಲ ಎನ್ನುತ್ತಾರೆ, ಪುರಂದರ ದಾಸರು ಸಾವಧಾನದಿಂದಿರು ಮನವೇ ದೇವರು ಕೊಟ್ಟಾನು ಎನ್ನುತ್ತಾ ನಮ್ಮ ಯಶಸ್ಸಿನ ತಪಸ್ಸಿಗೆ ತಾಳ್ಮೆ ಮುಖ್ಯ ಎಂದು ಸಾರಿದ್ದಾರೆ. ಜಗತ್ತಿನ ಅತೀ ದೊಡ್ಡ ಪ್ರಾರ್ಥನೆ ತಾಳ್ಮೆ ಎಂದ ಬುದ್ಧನ ಮಾತನ್ನು ಒಪ್ಪಿಕೊಳ್ಳಬೇಕಿದೆ. ಸಹನೆಯೊಂದಿದ್ದರೆ ಸಮಯವೂ ಸಹಾಯ ಮಾಡುತ್ತದೆ. ತಾಳಿದವನು ಬಾಳುವನು, ತಾಳ್ಮೆ ಇಲ್ಲದವನು ಸೋಲುವನು ಎಂಬುದು ಕಟ್ಟಟ್ಟ ಬುತ್ತಿ. ಒಂದು ಕಾಲದಲ್ಲಿ ಆಸೆಯೆ ದುಃಖಕ್ಕೆ ಮೂಲ ಎನ್ನುತ್ತಿದ್ದೆವು, ಇಂದು ತಾಳ್ಮೆ ಇಲ್ಲದವನ ಬಾಳು ಗೋಳು ಏಂಬ ಘೋಷ ಅನುರಣಿಸುತ್ತಿದೆ.

✒️ಸಂತೋಷ್ ನೆಲ್ಲಿಕಾರು































































































error: Content is protected !!
Scroll to Top