ತನಿಖೆಗೆ ತಡೆ ನೀಡಿ ಹೈಕೋರ್ಟ್ ಆದೇಶ
ಕಾರ್ಕಳ : ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ, ಅವಹೇಳನ ಆರೋಪದಲ್ಲಿ ಕೆರ್ವಾಶೆಯ ಸುಧೀರ್ ಬಂಗೇರ ವಿರುದ್ಧ ದಾಖಲಾಗಿದ್ದ ಪ್ರಕರಣದ ಮುಂದಿನ ತನಿಖೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಕರಣದ ಬಗ್ಗೆ ಆ. 25ರಂದು ನಡೆದ ವಿಚಾರಣೆಯನ್ನು ಪರಿಶೀಲಿಸಿದ ಹೈಕೋರ್ಟ್ ಮುಂದಿನ ತನಿಖೆಗೆ ತಡೆ ನೀಡಿ ಮಧ್ಯಂತರ ಆದೇಶವನ್ನು ಹೊರಡಿಸಿದೆ. ವಕೀಲ ಎಚ್. ಪವನಚಂದ್ರ ಶೆಟ್ಟಿ ಸುಧೀರ್ ಬಂಗೇರ ಪರವಾಗಿ ವಾದ ಮಂಡಿಸಿದ್ದರು.

ಪ್ರಕರಣ
ಕಾರ್ಕಳದ ಸುದ್ದಿವಾಹಿನಿಯ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರೆಸ್ಸೆಸ್ ಇನ್ನು ಎರಡು ವರ್ಷಗಳ ಅವಧಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಫೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಸುಧೀರ್ ಬಂಗೇರ ಜೂ. 6ರಂದು ಕಮೆಂಟ್ ಹಾಕಿದ್ದರು. ಈ ಬಗ್ಗೆ ನಿಟ್ಟೆ ಅತ್ತೂರಿನ ಸುರೇಶ ಚೇತನಹಳ್ಳಿ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೇರೆ ಬೇರೆ ಗುಂಪುಗಳ ನಡುವೆ ವೈರತ್ವ, ದ್ವೇಷ ಹಾಗೂ ಅವಮಾನ ಮೂಡಿಸುವ ಕಮೆಂಟ್ ಬರೆದು ಸಾಮಾಜಿಕ ಶಾಂತಿಯನ್ನು ಕದಡುವ ಉದ್ದೇಶದಿಂದ ರಾಜ್ಯದ ಗೃಹ ಮಂತ್ರಿಯವರು ದಲಿತ ಜಾತಿಗೆ ಸೇರಿದವರೆಂದು ತಿಳಿದರೂ ಅವರ ಜಾತಿಗೆ ಅವಹೇಳನ ಮಾಡುವ ರೀತಿಯಲ್ಲಿ ಸುಧೀರ ಬಂಗೇರ ಕಮೆಂಟ್ ಹಾಕಿರುತ್ತಾರೆ. ದಲಿತ ಮಂತ್ರಿಯವರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಲಾಗಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದರು. ಸುಧೀರ್ ವಿರುದ್ಧ ಅಪರಾಧ ಕ್ರಮಾಂಕ 82/2026 ಕಲಂ. 351(3), 196, 353(2)BNS ಹಾಗೂ 3(1) (r) (u) SC/ST Act ರಂತೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ಆರೋಪಿ ಸುಧೀರ ಬಂಗೇರನನ್ನು ಆತನ ಮಿಯ್ಯಾರಿನ ಮನೆಯಿಂದ ಜೂ. 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಬಂಧನಗೊಂಡಿದ್ದ ಒಂದೇ ವಾರದಲ್ಲಿ ಜೂ. 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.



















