ಕರಾವಳಿಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ರಾಜ್ಯ ಸರಕಾರ

ಕಾರ್ಕಳ : ಕರಾವಳಿ ಭಾಗದ ಅಭಿವೃದ್ಧಿಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್‌ ರಾಜ್ಯದಲ್ಲಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಮತ್ತು ಅನುಷ್ಠಾನದ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ಸರಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1429ರ ಮೂಲಕ ವಸತಿ ಸಚಿವರನ್ನು ಪ್ರಶ್ನಿಸಿದ ಶಾಸಕ ಸುನಿಲ್ ಕುಮಾರ್, ರಾಜ್ಯದಲ್ಲಿ ವಿವಿಧ ಯೋಜನೆಯಡಿ ಹಾಗೂ ಕರಾವಳಿ ಜಿಲ್ಲೆಗಳಿಗೆ ಮಂಜೂರಾದ ಮನೆಗಳ ಬಗ್ಗೆ ಅಂಕಿ-ಅಂಶಗಳನ್ನು ಕೋರಿದ್ದಾರೆ.

ಮೂರು ವರ್ಷಗಳಿಂದ (2023 ರಿಂದ 2026) ವರೆಗೆ ವಿವಿಧ ವಸತಿ ಯೋಜನೆಗಳಡಿ ವಿಧಾನಸಭಾ ಕ್ಷೇತ್ರವಾರು ಮಂಜೂರಾಗಿರುವ ಮನೆಗಳ ಸಂಖ್ಯೆ ಎಷ್ಟು ? 2026-27ನೇ ಸಾಲಿನಲ್ಲಿ ರಾಜ್ಯದಲ್ಲಿ ಎಷ್ಟು ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು ಮತ್ತು ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ (ಜಿಲ್ಲಾವಾರು ಮಾಹಿತಿ ಒದಗಿಸುವಂತೆ) ? ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು, ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ ? ಹಾಗೂ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ರಾಜ್ಯ ಸರಕಾರ ನೀಡುವ ಅನುದಾನ (ಯೋಜನಾವಾರು ವಿವರ ಒದಗಿಸುವಂತೆ) ಎಷ್ಟು ? ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿರುವ ಸರಕಾರ, ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಿಗೆ ಒಟ್ಟು 300, ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿಗೆ 08 ಸೇರಿದಂತೆ ಎಲ್ಲಾ ತಾಲೂಕುಗಳನ್ನು ಸೇರಿ ಒಟ್ಟು 102 ಮಂಜೂರಾದ ಮನೆಗಳು ಎಂದು ತಿಳಿಸಿದೆ.

ಆದರೆ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೆಲವಡೆ 30, 40 ಸಾವಿರ ಮನೆಗಳೂ ಮಂಜೂರಾಗಿದೆ. ಹಾಗಾದರೆ ಕರಾವಳಿ ಜಿಲ್ಲೆಗಳೇ ಮೇಲೆ ಸರಕಾರ ಏಕೆ ಈ ರೀತಿಯ ತಾರತಮ್ಯ ತೋರುತ್ತಿದೆ. ಅಲ್ಲದೆ ಬಸವ ವಸತಿ ಯೋಜನೆಯಡಿಯಲ್ಲಿ ಒಂದೇ ಒಂದು ಮನೆಯೂ ಕರಾವಳಿಗೆ ಬಿಡುಗಡೆಯಾಗಿಲ್ಲ. ಇನ್ನು ಮಂಜೂರಾಗಿರುವ ಅತ್ಯಲ್ಪ ಮನೆಗಳು ಸಹ ಸಾಮಾನ್ಯ ವಸತಿ ಯೋಜನೆಯಡಿ ಬಂದದ್ದಲ್ಲ ಬದಲಾಗಿ ಪ್ರಾಕೃತಿಕ ವಿಕೋಪ ನಿರ್ವಹಣೆಯಡಿ ಸಂಪೂರ್ಣ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಯೋಜನೆಯದ್ದಾಗಿದೆ.

ಬಡ ಕುಟುಂಬಗಳಿಗೆ ಸ್ವಂತ ಸೂರಿನ ಆಸರೆಯಾಗಬೇಕಿದ್ದ ಸರಕಾರಿ ಯೋಜನೆಗಳು ಕರಾವಳಿ ಭಾಗದಲ್ಲಿ ಶೂನ್ಯ ಹಂತಕ್ಕೆ ತಲುಪಿರುವುದು ದುರಂತ. ವಸತಿ ಯೋಜನೆಯ ಅನುಷ್ಠಾನ ಕರಾವಳಿ ಜಿಲ್ಲೆಗಳಿಗೆ ಇಲ್ಲವೇ ? ಎಂಬುದು ಪ್ರಶ್ನಾರ್ಥಕವಾಗಿದೆ.





























error: Content is protected !!
Scroll to Top