ಕಾರ್ಕಳ : ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿಗಳು ಮಾತ್ರವಲ್ಲದೆ ಅಧಿಕಾರಿಗಳೂ ಮುತುವರ್ಜಿ ವಹಿಸಿದ್ದಲ್ಲಿ ಯಶಸ್ವಿಯಾಗಿ ಜನರಿಗೆ ಸಲ್ಲುತ್ತದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಹೇಳಿದರು.
ಅವರು ಆ. 24ರಂದು ತಾ. ಪಂ. ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಆಗಸ್ಟ್ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳಿಂದ ಪಂಚಗ್ಯಾರಂಟಿ ಯೋಜನೆಗಳ ಮಾಹಿತಿ ಪಡೆದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡಿ, ಕಾರ್ಕಳ ತಾಲೂಕಿನಲ್ಲಿ 37,742 ಮಂದಿ ನೋಂದಾಯಿಸಿಕೊಂಡಿದ್ದು, 34,358 ಮಂದಿಗೆ ಪಾವತಿಯಾಗಿದೆ. ಇನ್ನು ಯೋಜನೆಯ ಪರಿಶೀಲನೆಯ ಬಗ್ಗೆ ಸಭೆ ನಡೆಯುತ್ತಿದ್ದು ತಂಡ ಸಿದ್ಧತೆ ಪ್ರಕ್ರಿಯೆ ನಡೆಯುತ್ತಿದೆ. ಪರಿಶೀಲನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳು ಹಾಗೂ ಡಬಲ್ ಅಕೌಂಟ್ ಸೇರಿದಂತೆ ಫಲಾನುಭವಿಗಳ ವಿವರಗಳನ್ನು ಪರಿಷ್ಕರಣೆ ನಡೆಸಲಾಗುವುದು. ಪ್ರಸ್ತುತ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದ ಅವರು ಪರಿಶೀಲನೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಜಾತಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ
ಆಹಾರ ಶಿರೇಸ್ತೆದಾರ್ ಶಹನಾಜ್ ಮಾಹಿತಿ ನೀಡಿ 31068 ಕಾರ್ಡ್‌ದಾರರು ಇದ್ದು ಅನ್ನಭಾಗ್ಯ ಯೋಜನೆಯಡಿ 15,573 ಪಡಿತರ ಚೀಟಿದಾರರು ಜಾತಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ. ಇನ್ನು ಪ್ರತಿ ವರ್ಷಕ್ಕೊಮ್ಮೆ ಇ-ಕೆವೈಸಿ ಮಾಡಿಸಬೇಕಿದೆ. ಸರ್ವರ್ ಸಮಸ್ಯೆಯಿದ್ದ ಕಾರಣ ಇ- ಕೆವೈಸಿಯ್ನು ನಿಲ್ಲಿಸಿದ್ದು, ಸೆ.1ರಿಂದ ಪ್ರಾರಂಭಿಸಲಾಗುವುದು. ಇನ್ನು ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ಕೆಲವೊಮ್ಮೆ ತೊಂದರೆಯಾಗುತ್ತಿದ್ದರೂ ಅಕ್ಕಿ ವಿತರಣೆ ನಿರಂತರವಾಗಿದೆ. ಮಿಯ್ಯಾರು ಹಾಗೂ ಎರ್ಲಪಾಡಿಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಆರಂಭಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು..


ಮೆಸ್ಕಾಂ ನಿಟ್ಟೆ ವಿಭಾಗ ಎಇಇ ವಿನಾಯಕ ಕೆ. ಕಾಮತ್ ಮಾಹಿತಿ ನೀಡಿ, ಗೃಹಜ್ಯೋತಿ ಯೋಜನೆಯಡಿ 45,481 ಮನೆಗಳ ಪೈಕಿ 99.98ರಷ್ಟು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಡೋರ್ ಲಾಕ್, ಬೇರೆಡೆ ಸ್ಥಳಾಂತರ ಸೇರಿದಂತೆ 2,067 ಮನೆಗಳ ಪರಿಷ್ಕರಣೆ ಕಾರ್ಯ ಬಾಕಿಯಿದ್ದು ಶೀಘ್ರದಲ್ಲೇ ಮಾಡಲಾಗುವುದು ಎಂದರು.
ಸಹಾಯಕ ಸಂಚಾರ ನಿರೀಕ್ಷಕ ರವಿ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 60 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಈ ವೇಳೆ ಅಜಿತ್ ಹೆಗ್ಡೆ ಪಳ್ಳಿ-ಕಣಂಜಾರು ಬಸ್ ಸಂಚಾರ ಸ್ಥಗಿತದಿಂದ ಶಾಲಾ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸಭೆಯಲ್ಲಿ ಒತ್ತಾಯಿಸಲಾಯಿತು. ಹೊಸ ಬಸ್‌ಗಳಿಗಿಂತ ಇರುವ ಬಸ್‌ಗಳನ್ನು ನಿಗದಿತ ಸಮಯಕ್ಕೆ ಸಮರ್ಪಕವಾಗಿ ಓಡಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಂದ, ಗ್ಯಾರಂಟಿ ಸಮಿತಿ ಸದಸ್ಯರಾದ ರಜನಿ, ಫಿಲಿಪ್ ಮಸ್ಕರೇನಸ್, ರಾಕೇಶ್ ನಾಯ್ಕ್, ಪ್ರಶಾಂತ್ ಪೂಜಾರಿ, ಚರಿತ್ರ ಎಂ., ಶೋಭಾ ರಾಣೆ, ಸಹೀಮ್, ಜಯ ಕುಲಾಲ್, ಸುರೇಶ್ ಆಚಾರ್ಯ, ಸಂತೋಷ್ ದೇವಾಡಿಗ, ಸಂತೋಷ್ ಶೆಟ್ಟಿ, ವಿಶ್ವನಾಥ ಭಂಡಾರಿ, ಹೇಮಂತ್ ಆಚಾರ್ಯ, ಯತೀಶ್ ಕೋಟ್ಯಾನ್, ಕಾರ್ಕಳ ಮೆಸ್ಕಾಂ ವಿಭಾಗ ಎಇಇ ಶಿಲ್ಪಾ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.














































































