ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತ್ ಜೋಡೋ ಯುವ ಸಂಘದ ನೋಂದಾವಣೆ ಹಾಗೂ ಸಂಘಟನಾ ಚಟುವಟಿಕೆಗಳನ್ನು ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಕುರಿತು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಸ್ತುವಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ಭಾರತ್ ಜೋಡೋ ಯುವ ಸಂಘದ ನೋಂದಾವಣೆ ಪ್ರಕ್ರಿಯೆ, ಅದರ ಉದ್ದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ಸಂಪರ್ಕಿಸುವ ಕುರಿತು ಮಾಹಿತಿ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಭಾರತ್ ಜೋಡೋ ಯುವ ಸಂಘಗಳನ್ನು ಪ್ರತಿ ಗ್ರಾಮದಲ್ಲಿಯೂ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಪ್ರತಿ ಗ್ರಾಮಗಳ ಯುವ ಸಂಘಗಳಿಗೆ ರಾಜ್ಯ ಸರಕಾರವು 10 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡುವ ನಿರ್ಧಾರವನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯವನ್ನು ಈ ಸಂಘಟನೆಯಲ್ಲಿ ಜೋಡಿಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಯೊಂದು ಪಂಚಾಯತ್ ಹಾಗೂ ಬೂತ್ ಮಟ್ಟದಲ್ಲಿ ಯುವಕರನ್ನು ತಲುಪಿ, ಅರ್ಹ ಯುವಕರನ್ನು ಭಾರತ್ ಜೋಡೋ ಯುವ ಸಂಘದೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ಉಸ್ತುವಾರಿಗಳಿಗೆ ಮಾರ್ಗದರ್ಶನ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಅವರು ಮಾತನಾಡಿ, ಗ್ಯಾರಂಟಿ ಯೋಜನೆಯಂತೆ ಯುವ ಸಂಘವು ಕೂಡ ಜನೋಪಯೋಗಿಯಾಗಿದ್ದು ಗ್ರಾಮೀಣ ಭಾಗದಲ್ಲಿ ನೋಂದಾವಣೆ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸಂಘಟನೆಯೊಂದಿಗೆ ಜೋಡಿಸುವಂತೆ ವಿನಂತಿ ಮಾಡಿದರು.
ಸಭೆಯಲ್ಲಿ ಭಾರತ್ ಜೋಡೋ ಪ್ರಚಾರ ಸ್ಟಿಕರನ್ನು ಬಿಡುಗಡೆಗೊಳಿಸಲಾಯಿತು. ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ ಮಾಳ, ಕೃಷಿ ಘಟಕದ ರಾಜ್ಯ ಕಾರ್ಯದರ್ಶಿ ಉದಯ್ ಶೆಟ್ಟಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಅನಿತಾ ಡಿ’ಸೋಜ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಬ್ಬೀರ್, ಅನಿಲ್ ನೆಲ್ಲಿಗುಡ್ಡೆ, ಪುರಸಭೆ ಮಾಜಿ ಅಧ್ಯಕ್ಷ ಸುಬಿತ್ ಎನ್. ಆರ್., ಪ್ರತಿಮಾ ರಾಣೆ, ಸೂರಜ್ ನಕ್ರೆ, ಗ್ರಾಮೀಣ ಅಧ್ಯಕ್ಷರು, ವಲಯ ಉಸ್ತುವಾರಿಗಳು, ಪಧಾಧಿಕಾರಿಗಳು ಉಪಸ್ಥಿತರಿದ್ದರು.






































































