ಮೃತಪಟ್ಟ ಮಗ ಹಣ ಬಾಕಿ ಇರಿಸಿರುವುದಾಗಿ ತಂದೆಗೆ ಬೆದರಿಕೆಯ ಕರೆ – ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮೃತಪಟ್ಟ ಮಗ ಹಣ ಬಾಕಿ ಇರಿಸಿರುವುದಾಗಿ ಆರೋಪಿಸಿ ತಂದೆಗೆ ಕರೆ ಮಾಡಿ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ.
ಉಡುಪಿ ಸಮೀಪದ ಪೆರಂಪಳ್ಳಿ ಸಂತೋಷ್ ನಗರದ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಪನಳ್ಳಿಯ ಸೈಯದ್ ಸೈಫ್ ಅಹಮ್ಮದ್ (40) ಬಂಧಿತರು.

ಆರೋಪಿಗಳು ಜು.2ರಂದು ಅಜಿತ್ ಪಡಿಯಾರ್‌ ಎಂಬವರಿಗೆ ಕರೆ ಮಾಡಿ ನಿಮ್ಮ ಮಗ ವಜ್ರದ ಹಣವನ್ನು ಬಾಕಿ ಇಟ್ಟಿದ್ದು, ಅದರಲ್ಲಿ ಬಾಕಿ ಇರುವ 5 ಲಕ್ಷ ರೂ.ವನ್ನು ನೀವು ಕೊಡಬೇಕು ಎಂದು ತಿಳಿಸಿದರು. ಅದಕ್ಕೆ ಅಜಿತ್ ನನ್ನ ಮಗ ಎಂಟು ವರ್ಷದ ಹಿಂದೆ ತೀರಿಹೋಗಿದ್ದು, ಈ ಬಗ್ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ ಎಂದಿದ್ದರು.

ನಂತರ ದುಬೈಯಲ್ಲಿರುವ ಅಜಿತ್ ಅವರ ಇನ್ನೋರ್ವ ಮಗ ಅಮೀತ್ ಅವರಿಗೂ ಕೂಡ ಫೋನ್ ಕರೆ ಮಾಡಿ, ಹಣ ಕೊಡದಿದ್ದರೆ ಊರಿನಲ್ಲಿರುವ ಹೆಂಡತಿ ರಕ್ಷಳಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಜು. 20 ಮತ್ತು ಆ.26ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೈಯದ್ ಸೈಫ್ ಅಹಮ್ಮದ್‌ನನ್ನು ಪೊಲೀಸ್ ಕಷ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











































































error: Content is protected !!
Scroll to Top