ನಾಳೆ ಕಣಜಾರಿನ ಮೂಲ ಮನೆಯಲ್ಲಿ ಅಂತ್ಯಸಂಸ್ಕಾರ
ಕಾರ್ಕಳ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ತರಬೇತಿ ವಿಮಾನ ಪತನದಲ್ಲಿ ಮೃತಪಟ್ಟ ಕಾರ್ಕಳ ತಾಲೂಕಿನ ಕಣಜಾರು ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಅವರ ಅಂತಿಮ ಸಂಸ್ಕಾರ ಆ. 30ರಂದು ಕಣಜಾರು ಕಡಬೆರ್ಕೆ ಮನೆಯಲ್ಲಿ ನಡೆಯಲಿದೆ.
ಉತ್ತರ ಪ್ರದೇಶದ ಕಾನ್ಪುರದ ಗರ್ಗ್ ಏವಿಯೇಷನ್ ತರಬೇತಿ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಭಿಷೇಕ್ ತರಬೇತಿ ಪಡೆಯುತ್ತಿದ್ದರು. ಆ. 27ರಂದು ನಡೆದ ತರಬೇತಿ ವಿಮಾನ ಪತನದ ಅಪಘಾತದಲ್ಲಿ ಅಭಿಷೇಕ್ ಪೂಜಾರಿ ಹಾಗೂ ಗುಜರಾತ್ ಮೂಲದ ಇನ್ಸ್ಟ್ರಕ್ಟರ್ ಸಚಿನ್ ಭಾಟಿಯಾ ಇಬ್ಬರೂ ದುರಂತವಾಗಿ ಮೃತಪಟ್ಟಿದ್ದರು
ಇಂದು (ಆ. 29) ರಂದು ಕಾನ್ಪುರದ ಸ್ವರೂಪ್ ನಗರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಕಣಜಾರಿಗೆ ಆ. 30ರ ಮುಂಜಾನೆ 3 ಗಂಟೆಗೆ ಪಾರ್ಥೀವ ಶರೀರ ಬರಲಿದ್ದು, ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಪಘಾತದ ಹಿಂದಿನ ದಿನವಷ್ಟೇ ಕುಟುಂಬವು ಅಭಿಷೇಕ್ ಅವರೊಂದಿಗೆ ಮಾತನಾಡಿದ್ದು, ಆಗ ಅವರು “ನಾನು ಸೆಪ್ಟೆಂಬರ್ 2 ರಂದು ಹಿಂತಿರುಗುತ್ತೇನೆ” ಎಂದು ಹೇಳಿದ್ದರು ಎಂಬುದಾಗಿ ಅವರ ತಂದೆ ಪ್ರಭಾಕರ್ ರಾಜು ಪೂಜಾರಿ ತಿಳಿಸಿದರು.
ಅಭಿಷೇಕ್ 190 ಗಂಟೆಗಳ ತರಬೇತಿಯನ್ನು ಪೂರೈಸಿದ್ದು, ಕೇವಲ 10 ಗಂಟೆಗಳ ತರಬೇತಿ ಬಾಕಿ ಇತ್ತು. ಇನ್ನೇನು 5 ದಿನದಲ್ಲಿ ಪೈಲಟ್ ಆಗಿ ಮರಳುತ್ತಿರುವುದಕ್ಕೆ ಕುಟುಂಬವು ಅತ್ಯಂತ ಸಂತೋಷದಿಂದಿತ್ತು. ಆದರೆ ಗುರುವಾರ ಮಧ್ಯಾಹ್ನದ ಅಪಘಾತದಲ್ಲಿ ಎಲ್ಲವೂ ಛಿದ್ರವಾಯಿತು. ಯಶಸ್ಸಿನ ಹೊಸ್ತಿಲಲ್ಲಿದ್ದಾಗಲೇ ವಿಧಿಯಾಟದಿಂದಾಗಿ ಅವರ ಜೀವನ ದುರಂತ ಅಂತ್ಯ ಕಂಡಿದೆ.



















