ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಪ್ರತಿಷ್ಠೆಯಲ್ಲ ಬದಲಾಗಿ ಪ್ರವಾಸೋದ್ಯಮ ಅಭಿವೃದ್ಧಿ : ಡಿ.ಕೆ.ಶಿವಕುಮಾರ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಬೇಕು ಎಂಬುದು ನನ್ನ ಪ್ರತಿಷ್ಠೆಯಲ್ಲ, ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆದು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕಂಬಳ ಆಯೋಜನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಿನ ಜನತೆಯ ಅಭಿರುಚಿಗೆ ತಕ್ಕಂತೆ ದಸರಾದಲ್ಲಿ ಹೊಸ ಕಾರ್ಯಕ್ರಮಗಳನ್ನು ಕೊಡಬೇಕು ಎಂದು ಕಂಬಳ ಆಯೋಜನೆ ಮಾಡಲಾಗುತ್ತಿದೆ. ಕಂಬಳ ನನ್ನ ಪ್ರತಿಷ್ಠೆಯಲ್ಲ, ಕಂಬಳ ಆಯೋಜನೆಯಿಂದ ಯಾವ ಪರಿಸರವೂ ನಾಶ ಆಗಲ್ಲ, ಯಾವ ಮರಗಳನ್ನು ತೆರವುಗೊಳಿಸುವುದಿಲ್ಲ, ಆದರೆ ಕೆಲವು ಪರಿಸರವಾದಿಗಳು ಮಾತ್ರ ವಿರೋಧ ಮಾಡುತ್ತಿದ್ದಾರೆ. ನನ್ನಷ್ಟು ಪರಿಸರದ ಮೇಲೆ ಕಾಳಜಿ ಇಟ್ಟವರಿಲ್ಲ. ನಾನು ಪರಿಸರವನ್ನು ಹೇಗೆ ಕಾಪಾಡುತ್ತಿದ್ದೇನೆ ಎಂಬುದನ್ನು ತಿಳಿಸುತ್ತೇನೆ ಎಂದು ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಒಂದೇ ತರಹದ ಹಲವು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿ, ರಾಜ್ಯದ ಎಲ್ಲಾ ರೀತಿಯ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೈಸೂರು ಪ್ರವಾಸಿ ತಾಣ ಇಲ್ಲಿಗೆ ದೇಶ ವಿದೇಶದಿಂದ ಸಾಕಷ್ಟು ಜನರು ಬರುತ್ತಾರೆ. ಹೊಸ ಕಾರ್ಯಕ್ರಮಗಳನ್ನು ನೀಡಿದರೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಇಲ್ಲಿನ ಹೋಟೆಲ್ ಸೇರಿದಂತೆ ಹಲವು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.







































error: Content is protected !!
Scroll to Top