ಎಲ್ಲಾ ಇಲಾಖೆಗಳಲ್ಲಿ ಕನ್ನಡ ಬಳಕೆ ಕಡ್ಡಾಯ : ಸರಕಾರ ಆದೇಶ

ಬೆಂಗಳೂರು : ಸರಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲೇನಿದೆ?
ಕನ್ನಡದಲ್ಲಿ ಬರುವ ಎಲ್ಲಾ ಅರ್ಜಿ, ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ಕಚೇರಿಯ ನಾಮಪಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ವಿಧಾನಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆಯನ್ನು ಕನ್ನಡದಲ್ಲಿಯೇ ಸಲ್ಲಿಸಬೇಕು. ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಇತರೆ ಎಲ್ಲಾ ಸರಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಲು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ಕಚೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡಬೇಕು. ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರಬೇಕು. ಕೇಂದ್ರ ಸರಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲ ಅಧಿಕಾರಿಗಳ ನೌಕರರ ಕರ್ತವ್ಯವಾಗಿದೆ. ಆದುದರಿಂದ ಸರ್ಕಾರ/ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳ/ ವಿಶ್ವವಿದ್ಯಾಲಯಗಳ/ ಅನುದಾನಿತ ಸಂಘ-ಸಂಸ್ಥೆಗಳ ಎಲ್ಲಾ ಅಧಿಕಾರಿ/ ನೌಕರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಒಂದು ವೇಲೆ ಸೂಚನೆಗಳನ್ನ ಉಲ್ಲಂಘಿಸಿದರೆ ಅವರ ವಿರುದ್ಧ ವೈಯಕ್ತಿಕವಾಗಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







































error: Content is protected !!
Scroll to Top