ಮಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ. ಮೃತರನ್ನು ಕಾರು ಚಾಲಕ ಕದ್ರಿ ನಿವಾಸಿ ಅಮನ್ ರಾವ್ ಮತ್ತು ಚಾಲಕನ ಹಿಂದಿನ ಸೀಟಿನಲ್ಲಿದ್ದ ಓಂಶ್ರೀ ಪೂಜಾರಿ ಎಂದು ಗುರುತಿಸಲಾಗಿದೆ.
ಐವರು ಯುವಕರಿದ್ದ ಫೋಕ್ಸ್ ವೇಗನ್ ವರ್ಟಸ್ ಕಾರು ತಲಪಾಡಿಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಾತ್ರಿ ಸುಮಾರು 2.30ರ ವೇಳೆಗೆ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗಿದ್ದ ವಂಶಿ ಮತ್ತು ಆಶಿಕ್ ತೀವ್ರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದೆ. ಇವರೊಂದಿಗಿದ್ದ ಇನ್ನೋರ್ವ ಇಟಲಿ ಮೂಲದ ಪ್ರವಾಸಿಗ ಜೆರ್ರಿ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ ಕಾರಿನ ಮುಂಭಾಗ ಸಂಪೂರ್ಣ ಪುಡಿ ಪುಡಿಯಾಗಿದ್ದು, ಇಂಜಿನ್ ಭಾಗವೇ ಹೊರಕ್ಕೆ ಬಂದಿದ್ದು ಏರ್‌ಬ್ಯಾಗ್ ಚಿಂದಿಯಾಗಿದೆ ಎಂದು ವರದಿಯಾಗಿದೆ.

ಓಂಶ್ರೀ ಪೂಜಾರಿ ಅವರು ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿದ್ದು, ಪಕ್ಷದ ಸಂಘಟನೆಯಲ್ಲಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

































































