ಹುಬ್ಬಳ್ಳಿ : ರಾಷ್ಟ್ರಧ್ವಜದ ಜೊತೆಗೆ ಕರ್ನಾಟಕ ಪೊಲೀಸ್ ಧ್ವಜ ಇಂಗ್ಲೆಂಡ್ನಲ್ಲಿ ರಾರಾಜಿಸಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೀನಿನಂತೆ ಈಜುವ ಚನ್ನಣ್ಣವರ, ಈಗಾಗಲೇ ಮಾಡಿರುವ ಹಲವು ಸಾಧನೆಗಳೊಂದಿಗೆ ಮತ್ತೊಂದು ಸಾಧನೆಯ ಗರಿ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
43 ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷಗಳಲ್ಲಿ ಈಜುವ ಮೂಲಕ ಮುರುಗೇಶ್ ಚನ್ನಣ್ಣವರ ಅವರನ್ನು ಒಳಗೊಂಡ 6 ಜನರ ಪ್ರೈಡ್ ಆಫ್ ಇಂಡಿಯಾ ತಂಡ ಮತ್ತೊಂದು ದಾಖಲೆ ನಿರ್ಮಿಸಿದೆ. ಇಂಗ್ಲೆಂಡ್‌ನ ಸ್ಯಾಮ್‌ಥೈರ್ ಹೊಯ್ ದಡದಿಂದ ಆರಂಭವಾದ ಈಜು, ಫ್ರಾನ್ಸ್‌ನ ವಿಸ್ಸೆಂಟ್ ಬೀಚ್‌ನಲ್ಲಿ ಮುಕ್ತಾಯವಾಯಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ಮೊರೆ ಇದ್ದರು.
ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ವಾಂತಿಭೇದಿ, ತಲೆ ಸುತ್ತುವುದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದ ತಂಡ, ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದೆ. ಪೊಲೀಸ್ ಅಧಿಕಾರಿ ಮುರುಗೇಶ್ ಚನ್ನಣ್ಣವರ, ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿ ಇಲಾಖೆಯ ಕೀರ್ತಿಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ. ಪ್ರೈಡ್ ಆಫ್ ಇಂಡಿಯಾ ತಂಡವು ಜೂನ್ 16 ರಂದು ಮುಂಜಾನೆ 2.15 ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52 ಕ್ಕೆ ಮುಕ್ತಾಯಗೊಳಿಸಿದೆ.











