ಕಾರ್ಕಳ : ಹುಟ್ಟುಹಬ್ಬದ ದಿನವೇ ಬಿಜೆಪಿ ಕಾರ್ಯಕರ್ತ ದಾರುಣವಾಗಿ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಜೂ. 7 ರಂದು ಸಂಭವಿಸಿದೆ.
ಕುಕ್ಕುಂದೂರು ಗ್ರಾಮದ ಪರಪು ನಿವಾಸಿ, ಆಟೋ ಚಾಲಕ, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಎಂಬವರೇ ಮೃತಪಟ್ಟ ದುರ್ದೈವಿ.
ಘಟನೆ ವಿವರ
ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲೆಂದು ಮನೆಯಿಂದ ಪೇಟೆಗೆ ಬಂದಿದ್ದ ಸುಬ್ರಹ್ಮಣ್ಯ ಅವರು ವಾಪಸ್ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ಕಳೆದು ಸ್ಕೂಟಿ ಸಹಿತ ಹೊಳೆಗೆ ಬಿದ್ದಿರುತ್ತಾರೆ. ರಾತ್ರಿ ಸುಮಾರು 10:30 ಈ ಘಟನೆ ಸಂಭವಿಸಿದೆ. ರಾತ್ರಿಯಿಡೀ ಹುಡುಕಾಡಿದ್ರೂ ಸುಬ್ರಹ್ಮಣ್ಯ ಅವರ ಸುಳಿವು ಸಿಕ್ಕಿರಲಿಲ್ಲ. ಇಂದು ಊರವರು ಹುಡುಕುವಾಗ ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ ಕೃಷ್ಣ ಸಾಲ್ಯಾನ್, ತಾಯಿ ಕೌಶಲ್ಯ, ತಂಗಿ ಆಶಾ, ಪತ್ನಿ ಮನಿಶಾ, ಪುತ್ರಿ ತಸ್ಮಯಿಯನ್ನು ಅಗಲಿದ್ದಾರೆ.

ಹೊಳೆಯಲ್ಲಿ ನೀರು ಮುಳುಗುವಷ್ಟಿಲ್ಲದ ಕಾರಣ ಹೃದಯಾಘಾತದಿಂದ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ









































