ಯಾವುದೇ ಸ್ತಿರಾಸ್ತಿ ಅಂದರೆ ಜಾಗ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟಂತೆ ಸ್ವಾಧೀನತೆ ಮತ್ತು ಹಕ್ಕನ್ನು ನಿರ್ಧರಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟ ಕಂದಾಯ ದಾಖಲೆಗಳು ಮತ್ತು ಶೀರ್ಷಿಕೆ ದಾಖಲೆಗಳು(ಟೈಟಲ್ ಡೀಡ್) ಇವುಗಳನ್ನು ಅವಶ್ಯಕವಾಗಿ ಪರಿಶೀಲಿಸಬೇಕಾಗುತ್ತದೆ. ಕಾರಣ ಕೆಲವು ಸಂದರ್ಭಗಳಲ್ಲಿ ಜಾಗ ಅಥವಾ ಕಟ್ಟಡದ ಮಾಲೀಕತ್ವದ ದಾಖಲೆಗಳು ಸಂಬಂಧಪಟ್ಟ ಮಾಲೀಕರ ಹೆಸರಿನಲ್ಲಿದ್ದು ವಾಸ್ತವಿಕವಾಗಿ ಸದರಿ ಸ್ವತ್ತಿನ ಸ್ವಾಧೀನತೆ ಮತ್ತು ಅನುಭೋಗವನ್ನು ಇತರ ವ್ಯಕ್ತಿಗಳು ಹೊಂದಿರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಕರ್ನಾಟಕ ಭೂಕಂದಾಯ ಕಾಯಿದೆ 1964ರ ಅನ್ವಯ ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಖಾತೆ, ಸರ್ವೆ, ತೀರ್ವೆ ವ ಕಂದಾಯ ವಸೂಲಾತಿಗಾಗಿ ಮತ್ತು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಕರ್ನಾಟಕ ಭೂಕಂದಾಯ ಕಾಯಿದೆಯ ಪ್ರಕಾರ ತಾವು ಹೊಂದಿರುವ ವಿವಿಧ ಜವಾಬ್ದಾರಿಗಳನ್ನು ಮತ್ತು ಅಧಿಕಾರವನ್ನು ಆಡಳಿತಾತ್ಮಕ ರೂಪದಲ್ಲಿ ಚಲಾಯಿಸಲು ಹಾಗೂ ಕೃಷಿಯೇತರ ನಿವೇಶನಗಳು ಮತ್ತು ಕಟ್ಟಡಗಳಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಮತ್ತು ಸರಕಾರದ ಇತರ ಇಲಾಖೆಯವರು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಇರಿಸುವ ದಾಖಲೆಗಳನ್ನು ಕಂದಾಯ ದಾಖಲೆಗಳು ಎನ್ನುತ್ತಾರೆ.
ಕಂದಾಯ ದಾಖಲೆಗಳಲ್ಲಿ ಜಮೀನು ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ವಿವರಗಳನ್ನು ಅಂದರೆ ಸರ್ವೆ ನಂಬ್ರ, ವಿಸ್ತೀರ್ಣ, ಮಾಲೀಕರ ಅಥವಾ ಅನುಭೋಗದಾರರ ಹೆಸರು, ಹಕ್ಕಿನ ಸ್ವರೂಪ, ಬೆಳೆಗಳ ವಿವರ, ಸ್ವತ್ತಿನ ಮೇಲಿನ ಋಣಭಾರ, ಸಾಲ ಮತ್ತು ಜವಬ್ದಾರಿಗಳ ಕುರಿತು ವಿವರವನ್ನು ನಮೂದಿಸಬೇಕಾಗುತ್ತದೆ. ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರಗಳಿಂದ ಒಬ್ಬ ವ್ಯಕ್ತಿ ತನ್ನ ಹೆಸರಲ್ಲಿ ಹೊಂದಿರುವ ಯಾವುದೇ ಭೂಮಿ ಅಥವಾ ಕಟ್ಟಡದ ಸ್ವಾಧೀನತೆ ಮತ್ತು ಹಿತಾಸಕ್ತಿಯನ್ನು ಪರಿಶೀಲಿಸಬಹುದಾಗಿದೆ ಮತ್ತು ಕಂದಾಯ ದಾಖಲೆಗಳ ನಮೂದುಗಳು ಊಹನಾತ್ಮಕ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಕಂದಾಯ ದಾಖಲೆಗಳು ಯಾವುದೇ ಭೂಮಿ ಅಥವಾ ಕಟ್ಟಡದ ಮೇಲಿನ ಕಾನೂನುಬದ್ಧ ಮಾಲೀಕತ್ವವನ್ನು ನಿರ್ಧರಿಸುವ ದಾಖಲೆಗಳಾಗಿರುವುದಿಲ್ಲ. ಭೂಮಿ ಅಥವಾ ಕಟ್ಟಡದ ಮೇಲಿನ ಅಥವಾ ಕಾನೂನುಬದ್ಧ ಹಕ್ಕು ಅಥವಾ ಹಿತಾಸಕ್ತಿಯನ್ನು ನಿರ್ಧರಿಸಬೇಕಾದರೆ ಸಂಬಂಧಪಟ್ಟ ಭೂಮಿ ಅಥವಾ ಕಟ್ಟಡಕ್ಕೆ ಹಕ್ಕು ಪತ್ರ ವ ಶೀರ್ಷಿಕೆ ಪತ್ರ (ಟೈಟಲ್ ಡೀಡ್) ಪರಶೀಲಿಸಬೇಕಾಗಿರುವುದು ಅತ್ಯಂತ ಅವಶ್ಯಕವಾಗಿ ಇರುತ್ತದೆ. ಹಕ್ಕು ಪತ್ರ ವ ಮೂಲ ದಾಖಲೆಗಳು ಯಾವುದೆಂದರೆ ಭೂಮಿ ಅಥವಾ ಕಟ್ಟಡದ ಮೇಲೆ ವ್ಯಕ್ತಿಯೋಬ್ಬ ಹೊಂದುವ ಮಾಲಿಕತ್ವದ ದಾಖಲೆ ಅಂದರೆ ಕ್ರಯ ಪತ್ರ, ಸರಕಾರದಿಂದ ಅಥವಾ ಭೂನ್ಯಾಯ ಮಂಡಳಿಯಿಂದ ನೀಡಲ್ಪಟ್ಟ ಹಕ್ಕು ಪತ್ರ, ಹಕ್ಕು ಖುಲಾಸೆ ಪತ್ರ, ವೀಲುನಾಮೆ, ಶಾಶ್ವತಗೇಣಿ ಅಂದರೆ ಮೂಲಗೇಣಿ ಪತ್ರ ಇತ್ಯಾದಿಗಳು ಸೇರಿರುತ್ತವೆ.
ಮೇಲ್ಕಾಣಿಸಿದ ದಾಖಲೆಗಳ ಮೂಲಕ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹಕ್ಕನ್ನು ಪರಾಭಾರೆ ಮಾಡಿರುವ ಸಂದರ್ಭದಲ್ಲಿ, ಹಕ್ಕನ್ನು ಪರಾಭಾರೆ ಮಾಡಿದ ವ್ಯಕ್ತಿ ತಾನು ಹೊಂದಿದ್ದ ಹಕ್ಕಿನ ಮೂಲ ದಾಖಲೆಯನ್ನು ಪರಿಶೀಲಿಸುವುದರಿಂದ ಭೂಮಿ ಅಥವಾ ಕಟ್ಟಡದ ಸ್ವಾಧೀನತೆಯನ್ನು ಹೊಂದಿರುವ ವ್ಯಕ್ತಿ ಆತನ ದಾಖಲೆಯಲ್ಲಿ ನಮೂದಿಸಿದ ಆಸ್ತಿಯ ಮೇಲೆ ಸಂಪೂರ್ಣವಾದ ಮತ್ತು ಕಾನೂನುಬದ್ಧವಾದ ಹಕ್ಕನ್ನು ಹೊಂದಿರುವನೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಯಾವುದೇ ಒಂದು ಭೂಮಿ ಅಥವಾ ಕಟ್ಟಡದ ಮೇಲಿನ ಕಾನೂನುಬದ್ಧ ಹಕ್ಕನ್ನು ಮತ್ತು ಮಾಲಿಕತ್ವ ನಿರ್ಧರಿಸಬೇಕಾದರೆ ಅದಕ್ಕೆ ಸಂಬಂಧಪಟ್ಟ ಹಕ್ಕಿನ ಮೂಲ ಸ್ವರೂಪವನ್ನು ಅವಶ್ಯಕವಾಗಿ ಪರಿಶೀಲಿಸಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟಂತೆ ಕಾನೂನುಬದ್ಧ ಹಕ್ಕನ್ನು ಹೊಂದಿರುವ ವ್ಯಕ್ತಿಯ ಹೆಸರು ಕಂದಾಯ ದಾಖಲೆಗಳಲ್ಲಿ ನಮೂದಾಗದೆ ಇರುವ ಸಾಧ್ಯತೆ ಇರುತ್ತದೆ. ಅಥವಾ ಭೂಮಿ ಅಥವಾ ಕಟ್ಟಡದ ಮೇಲೆ ಯಾವುದೇ ರೀತಿಯ ಕಾನೂನುಬದ್ಧ ಹಕ್ಕನ್ನು ಹೊಂದಿರದ ವ್ಯಕ್ತಿಯ ಹೆಸರು ತಪ್ಪಾಗಿ ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ಸಾಧ್ಯತೆ ಸಹಾ ಇರುತ್ತದೆ. ಯಾವುದೇ ಭೂಮಿ ಅಥವಾ ಕಟ್ಟಡದ ಮೇಲಿನ ಕಾನೂನುಬದ್ಧ ಮಾಲಿಕತ್ವದ ಹಕ್ಕನ್ನು (ಟೈಟಲ್) ನಿರ್ಧರಿಸುವ ಅಧಿಕಾರ ಕಂದಾಯ ಅಧಿಕಾರಿಗಳಿಗೆ ಅಥವಾ ನೋಂದಣಾಧಿಕಾರಿಗಳಿಗೆ ಇರುವುದಿಲ್ಲ. ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವ್ಯಕ್ತಿಗಳ ಹೆಸರು ಅಥವಾ ಇತರ ವಿವರಗಳನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರವನ್ನು ಭೂಕಂದಾಯ ಅಧಿನಿಯಮದ ಪ್ರಕಾರ ಸಮ್ಮಂದಪಟ್ಟ ಕಂದಾಯ ಅಧಿಕಾರಿಗಳಿಗೆ ನೀಡಲಾಗಿರುತ್ತದೆ. ಆದರೆ ಯಾವುದೇ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲಿಕತ್ವ ಅಥವಾ ಒಡೆತನದ ಬಗ್ಗೆ ಪಕ್ಷಗಾರರೊಳಗೆ ವಿವಾದ ಉಂಟಾದಲ್ಲಿ ಪಕ್ಷಗಾರರು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ತಮ್ಮ ಮಾಲಿಕತ್ವ ಅಥವಾ ಒಡೆತನದ ಹಕ್ಕನ್ನು ಸಾಭೀತುಪಡಿಸಬೇಕಾಗುತ್ತದೆ ಹೊರತು ಈ ಸಂದರ್ಭದಲ್ಲಿ. ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರಗಳು ಪಕ್ಷಗಾರರಿಗೆ ಸಹಕಾರಿಯಾಗುವುದಿಲ್ಲ. ಆದುದರಿಂದ ಯಾವುದೇ ಭೂಮಿ ಅಥವಾ ಕಟ್ಟಡವನ್ನು ಖರೀದಿಸುವ ಸಂದರ್ಭದಲ್ಲಿ ಖರೀದಿದಾರರು ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗದೇ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ಹಕ್ಕಿನ ಕುರಿತಾದ ಎಲ್ಲಾ ಮೂಲ ದಾಖಲೆಗಳನ್ನು (ಟೈಟಲ್ ಡೀಡ್ಸ್) ಮತ್ತು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ಕಾನೂನು ತಜ್ಞರಿಂದ ಸೂಕ್ತ ಸಲಹೆ ಪಡೆದು ಖರೀದಿ ವ್ಯವಹಾರವನ್ನು ನಡೆಸುವುದರಿಂದ ಖರೀದಿಸುವ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲಿಕತ್ವದ ಬಗ್ಗೆ ಮುಂದೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.
































































