ಪ್ರಾಕೃತಿಕ ವಿಕೋಪ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ

ಕಾರ್ಕಳ : ಪ್ರಾಕೃತಿಕ ವಿಕೋಪಕ್ಕೆ ಕಾರ್ಕಳ ಕ್ಷೇತ್ರದಲ್ಲಿ ಯಾವೊಂದು ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಶಾಸಕ ಸುನಿಲ್‌ ಕುಮಾರ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜಾಗೃತಿಯಿಲ್ಲದೇ ಅನಾಹುತ ನಡೆಯಿತು ಎಂಬಂತಹ ಘಟನೆಗಳು ಉಭಯ ತಾಲೂಕಿನಲ್ಲಿ ನಡೆಯಬಾರದು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಮಸ್ಯೆ ಅಥವಾ ಜವಾಬ್ದಾರಿಗಳನ್ನು ನಮ್ಮದಲ್ಲ ಎಂದು ಬೇರೆ ಇಲಾಖೆಗಳಿಗೆ ವರ್ಗಾಯಿಸದೇ ಯಾವುದೇ ಸಮಸ್ಯೆ ಬಂದರೂ ಎಲ್ಲಾ ಇಲಾಖೆಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಅವರು ಮೇ 29ರಂದು ಕಾರ್ಕಳ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಕುರಿತು ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ನಾಟ್‌ರಿಚೇಬಲ್‌ ಆಗದಿರಲಿ
ಅವಶ್ಯವಾಗಿ ಮುಂದಿನ ಮೂರು ತಿಂಗಳು ಯಾವುದೇ ಅಧಿಕಾರಿಗಳ ಫೋನ್‌ ನಾಟ್‌ರಿಚೇಬಲ್‌ ಆಗದಿರಲಿ. ಬಂದಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರಕ್ಕಾಗಿ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ. ನೀವು ಫೋನ್‌ ರಿಸಿವ್‌ ಮಾಡದಿದ್ದಲ್ಲಿ ಮೇಲಾಧಿಕಾರಿಗಳಿಗೆ ಫೋನ್‌ ಹೋಗುತ್ತೆ. ನಿಮ್ಮ ಫೋನ್‌ಗಳನ್ನು ಅಲರ್ಟ್‌ ಆಗಿ ಇಟ್ಟುಕೊಳ್ಳಿ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಎಲ್ಲವನ್ನೂ ನಿಭಾಯಿಸುವ ಜವಾಬ್ದಾರಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಯವರದ್ದಾಗಿದೆ. ನಿಮ್ಮೊಂದಿಗೆ ಜನಪ್ರತಿನಿಧಿಗಳ ತಂಡವಿದೆ. ಚರಂಡಿಯ ನೀರಿನಿಂದ ಹಿಡಿದು ಕರೆಂಟ್‌ ಕೋವಿಡ್‌ವರೆಗೆ ಎಲ್ಲಾ ಸಮಸ್ಯೆಗಳ ನಿವಾರಣೆಯ ಜವಾಬ್ದಾರಿ ನಿಮ್ಮದಾಗಿದ್ದು ಈ ಬಗ್ಗೆ ಗಮನ ಹರಿಸಿ ಎಂದರು.

ಮಕ್ಕಳ ಚಲನವಲನದ ಬಗ್ಗೆ ಗಮನವಿರಲಿ
ಮಕ್ಕಳ ಚಲನವಲನದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಈ ಬಗ್ಗೆ ಉಭಯ ತಾಲೂಕಿನ ತಹಶೀಲ್ದಾರ್‌, ಇಓ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರು ಜಂಟಿಯಾಗಿ ಶಾಲಾ ಮುಖ್ಯ ಶಿಕ್ಷಕಕರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಗ್ರೂಪ್‌ಗಳಲ್ಲಿ ಮೆಸೇಜ್‌ ಅಥವಾ ವಾಯ್ಸ್‌ ಮೆಸೇಜ್‌ ಹಾಕಿದೆ ಎಂಬ ಕಾರಣ ಯಾವುದನ್ನೂ ಕೊಡಬೇಡಿ. ಏಕೆಂದರೆ ಅವುಗಳಿಂದ ಪಾಕೃತಿಕ ವಿಕೋಪ ತಡೆಗಟ್ಟಲು ಸಾಧ್ಯವಿಲ್ಲ. ಆದ್ದರಿಂದ ನೀವೇ ಖುದ್ದಾಗಿ ವೈಯಕ್ತಿಕವಾಗಿ ಗಮನಹರಿಸಬೇಕು ಎಂದು ಸುನಿಲ್‌ ಕುಮಾರ್‌ ಹೇಳಿದರು.

ಆಕ್ಸಿಡೆಂಟ್‌ ಝೋನ್‌
ತಾಲೂಕಿನಲ್ಲಿ ಸುಮಾರು ಎಂಟು ಸ್ಪಾಟ್‌ಗಳಲ್ಲಿ ನಿರಂತರವಾಗಿ ಆಕ್ಸಿಡೆಂಟ್‌ ಸಂಭವಿಸುತ್ತಿದೆ. ಈ ಸ್ಪಾಟ್‌ಗಳ ಬಗ್ಗೆ ಮುಖ್ಯವಾಗಿ ಪಿಡಬ್ಲ್ಯೂಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಹೇಳಿದರು.

ನಿಗದಿ ಪಡಿಸಿಕೊಳ್ಳಿ
ಮೆಸ್ಕಾಂ ಇಲಾಖೆಯವರು ಏನೇ ಸಮಸ್ಯೆಯಾದರೂ ಗರಿಷ್ಠ 6 ಗಂಟೆಯೊಳಗೆ ವಿದ್ಯುತ್‌ ಸಂಪರ್ಕ ಸರಿಪಡಿಸಿಕೊಡುತ್ತೇವೆ ಎಂದು ಟಾರ್ಗೆಟ್‌ ಇಟ್ಟುಕೊಳ್ಳಿ. ಆ ಸವಾಲನ್ನು ಮೆಸ್ಕಾಂ ಇಲಾಖಾಧಿಕಾರಿಗಳು ಸ್ವೀಕರಿಸಬೇಕು. ಹೀಗಾದಲ್ಲಿ ಸ್ವರ್ಣ ಕಾರ್ಕಳದ ಕನಸು ನನಸಾಗಲು ಸಹಕಾರಿಯಾಗುತ್ತದೆ ಎಂದರು. ತಾಲೂಕಿನಲ್ಲಿ ಏನೇ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತನ್ನಿ. ಪರಿಹಾರಕ್ಕಾಗಿ ನಾನು ಸದಾ ಸಿದ್ಧನಿರುತ್ತೇನೆ. ಅದಕ್ಕೆ ಪೂರಕವಾಗಿ ನಮ್ಮ ಕಚೇರಿಯೂ ಇರಲಿದೆ ಎಂದರು.

ಜೆಜೆಎಂ (ಜಲ ಜೀವನ್‌ ಮಿಷನ್)‌ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಡೆದ ಅಮೃತ್‌ ಯೋಜನೆ -2ರಡಿ ಕಾಮಗಾರಿ ನಡೆಸುವಾಗ ರಸ್ತೆ ಅಗೆದು ನಗರದಲ್ಲಿ ಬಹಳಷ್ಟು ತೊಂದರೆಯಾಗಿದೆ. ಅವುಗಳನ್ನು ವಾರದೊಳಗಾಗಿ ಸರಿಪಡಿಸುವಂತೆ ಸುನಿಲ್‌ ಕುಮಾರ್‌ ಸೂಚನೆ ನೀಡಿದರು. ಮುಂಡ್ಲಿ ಜಲಾಶಯಕ್ಕೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುವಂತೆಯೂ ಮೆಸ್ಕಾಂ ಅಧಿಕಾರಿಗೆ ತಿಳಿಸಿದರು.

ದೇವಸ್ಥಾನಗಳಿಗೆ ಗಿಡ ನೀಡಿ
ಈ ವರ್ಷ ಬ್ರಹ್ಮಕಲಶೋತ್ಸವ ನಡೆದ ದೇವಸ್ಥಾನಗಳಿಗೆ ಇಲಾಖಾ ವತಿಯಿಂದ ಗಿಡ ನೀಡಿ. ದೇಗುಲ ಆವರಣದಲ್ಲಿ ಆಡಳಿತ ಸಮಿತಿಯು ಗಿಡ ನೆಟ್ಟು ಪೋಷಣೆ ಮಾಡುವಂತೆ ವಿನಂತಿಸುವಂತೆ ಸುನಿಲ್‌ ಕುಮಾರ್‌ ಅರಣ್ಯ ಇಲಾಖಾಧಿಕಾರಿಗಳಿಗೆ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್‌, ಕುಂದಾಪುರ ವಿಭಾಗ ಸಹಾಯಕ ಕಮೀಷನರ್‌ ರಶ್ಮಿ ಆರ್‌., ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಕಾರ್ಕಳ ತಾಲೂಕು ತಹಶೀಲ್ದಾರ್‌ ಪ್ರದೀಪ್‌ ಆರ್., ಹೆಬ್ರಿ ತಾಲೂಕು ತಹಶೀಲ್ದಾರ್‌ ಪ್ರಸಾದ್‌, ಪುರಸಭಾ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಕಾರ್ಕಳ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ ರಾವ್‌, ಕಾರ್ಕಳ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ವನ್ಯಜೀವಿ ಇಲಾಖೆ ಎಸಿಎಫ್‌ ಶ್ರೀಧರ್‌ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.





























































































































error: Content is protected !!
Scroll to Top