ನಕ್ಸಲ್ ವಿರೋಧಿ ಪಡೆಯ ಅರ್ಧದಷ್ಟು ಭಾಗವನ್ನು ಕೋಮು ವಿರೋಧಿ ಪಡೆಯಾಗಿ ಪರಿವರ್ತನೆ- ಪರಮೇಶ್ವರ್
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಅಬ್ದುಲ್ ರಹಿಮಾನ್ ಎಂಬ 32 ವರ್ಷದ ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮುಲಾಜಿಲ್ಲದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿ, ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು ರಾಜ್ಯ ಸರಕಾರ ಈ ಹತ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಅಂತಹ ಕೋಮು ಚಟುವಟಿಕೆಗಳು ಹಾಗೂ ಕೊಲೆಗಳನ್ನು ನಿಗ್ರಹಿಸುವವರೆಗೆ ತಾವು ವಿಶ್ರಾಂತಿ ಪಡೆಯುವುದಿಲ್ಲ ಅಲ್ಲದೆ ತಕ್ಷಣ ಜಾರಿಗೆ ಬರುವಂತೆ ಕೋಮು ವಿರೋಧಿ ಪಡೆ ರಚಿಸುವ ಬಗ್ಗೆ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಕೋಮು ವಿರೋಧಿ ಪಡೆ ರಚಿಸುವುದು ಹೇಗೆ, ಯಾರು ಅದರ ನೇತೃತ್ವ ವಹಿಸುತ್ತಾರೆ, ಅವರಿಗೆ ಯಾವ ಅಧಿಕಾರ ನೀಡಬೇಕು – ಆ ಎಲ್ಲಾ ವಿಷಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ಹಿಡಿಯಿತು. ನಾವು ಅಂತಿಮವಾಗಿ ಆದೇಶ ಹೊರಡಿಸಿದ್ದೇವೆ. ನಾವು ನಕ್ಸಲ್ ವಿರೋಧಿ ಪಡೆಯನ್ನು ವಿಸರ್ಜಿಸಲು ಯೋಜಿಸಿದ್ದೇವೆ. ಆ ನಕ್ಸಲ್ ವಿರೋಧಿ ಪಡೆಯ ಅರ್ಧದಷ್ಟು ಭಾಗವನ್ನು ಕೋಮು ವಿರೋಧಿ ಪಡೆಯಾಗಿ ಪರಿವರ್ತಿಸಲಾಗಿದೆ. ಅಗತ್ಯವಿರುವ ಎಲ್ಲಾ ಅಧಿಕಾರ ಮತ್ತು ಸೌಲಭ್ಯಗಳನ್ನು ಅವರಿಗೆ ಒದಗಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.






























































