ಹಿಂದೂ ವಿವಾಹ ಅಧಿನಿಯಮ 1955

ಹಿಂದೂ ಧರ್ಮಕ್ಕೆ ಸೇರಿರುವ ವಿವಾಹಿತರ ವೈವಾಹಿಕ ಹಕ್ಕುಗಳಿಗೆ ಸೂಕ್ತ ರಕ್ಷಣೆಯನ್ನು ನೀಡುವುದಕ್ಕಾಗಿ ಹಾಗೂ ವೈವಾಹಿಕ ಸಮಸ್ಯೆಗಳಿಗೊಳಪಟ್ಟವರ ಮಕ್ಕಳ ಭವಿಷ್ಯಕ್ಕೆ ಸುರಕ್ಷತೆಯನ್ನು ನೀಡುವುದಕ್ಕಾಗಿ ಹಿಂದೂ ವಿವಾಹ ಅಧಿನಿಯಮ 1955 ಎಂಬ ಕಾನೂನು ಚಾಲ್ತಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ಒಂದು ವಿವಾಹವು ಕಾನೂನುಬದ್ದವಾಗಿ ಊರ್ಜಿತವಾಗಿರಬೇಕಾದರೆ ವಿವಾಹದ ಸಮಯದಲ್ಲಿ ವರ ಅಥವಾ ವಧುವಿಗೆ ಜೀವಂತ ಹೆಂಡತಿಯಾಗಲೀ ಅಥವಾ ಗಂಡನಾಗಲೀ ಇರಬಾರದು, ವಿವಾಹಕಾಲದಲ್ಲಿ ಯಾವುದೇ ವಿವಾಹಿತ ದಂಪತಿಗಳು ತಮ್ಮ ಮಾನಸಿಕ ಅಸ್ವಸ್ಥತೆಯ ಪರಿಣಾಮವಾಗಿ ಆ ವಿವಾಹಕ್ಕೆ ಒಪ್ಪಿಗೆ ನೀಡಿರಬಾರದು, ಸ್ವಇಚ್ಚೆಯಿಂದ ಒಪ್ಪಿಗೆಯನ್ನು ನೀಡಲು ಸಮರ್ಥರಾಗಿರಬೇಕು, ಪದೇ ಪದೇ ಮರುಕಳಿಸುವ ಬುದ್ಧಿ ಭ್ರಮಣೆಗೆ ಒಳಗಾಗಿರಬಾರದು, ವಿವಾಹ ಸಮಯದಲ್ಲಿ ವರನಿಗೆ ಇಪ್ಪತ್ತೊಂದು ವರ್ಷಗಳು ವಧುವಿಗೆ ಹದಿನೆಂಟು ವರ್ಷಗಳು ಪೂರ್ತಿಯಾಗಿರಬೇಕು ಮತ್ತು ಅವರಲ್ಲಿ ಪ್ರತಿಯೊಬ್ಬರಿಗೆ ಅನ್ವಯಿಸುವ ರೂಢಿ ಅಥವಾ ಆಚರಣೆಯಲ್ಲಿ ಅವರೀರ್ವರ ವಿವಾಹಕ್ಕೆ ಅವಕಾಶವಿದ್ದ ಹೊರತು ಪರಸ್ಪರ ಸಪಿಂಡರಾಗಿರಬಾರದು.

ದಾಂಪತ್ಯ ಜೀವನದಲ್ಲಿ ಹಿಂದೂ ದಂಪತಿಯೊಳಗೆ ಉಂಟಾಗುವ ವಿವಾದದ ಸಂದರ್ಭದಲ್ಲಿ ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಿಗುವ ರಕ್ಷಣೆ ಮತ್ತು ನಿವೃತ್ತಿಗಳು ಯಾವುವೆಂದರೆ,
(1) ಗಂಡನಾಗಲಿ, ಹೆಂಡತಿಯಾಗಲಿ, ಯುಕ್ತ ಕಾರಣವಿಲ್ಲದೆ ಒಬ್ಬರು ಮತ್ತೊಬ್ಬರ ಸಂಗವನ್ನು ತ್ಯಜಿಸಿ ಪ್ರತ್ಯೇಕವಾಗಿ ಜೀವನ ನಡೆಸುವ ಸಂದರ್ಭದಲ್ಲಿ ಅವರಲ್ಲಿ ಭಾಧಿತರಾದವರು ಅಂದರೆ ತೊಂದರೆಗೊಳಗಾದವರು ದಾಂಪತ್ಯ ಜೀವನದಲ್ಲಿನ ಅಧಿಕಾರಿಗಳ ಪೂರ್ವಸ್ಥಿತಿ ಪ್ರಾಪ್ತಿಗಾಗಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಆ ಅರ್ಜಿಯಲ್ಲಿ ತಿಳಿಸಿರುವ ವಿಷಯಗಳು ಸತ್ಯ ಮತ್ತು ಕಾನೂನುಸಮ್ಮತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಲ್ಲಿ ಸದರಿ ಅರ್ಜಿಯನ್ನು ಪುರಸ್ಕರಿಸಿ ದಾಂಪತ್ಯ ಜೀವನದಲ್ಲಿನ ಅಧಿಕಾರಗಳ ಪೂರ್ವಸ್ಥಿತಿ ಪ್ರಾಪ್ತಿಯ ಬಗ್ಗೆ ಸಕಾರಣ ಇಲ್ಲದೆ ಪ್ರತ್ಯೇಕ ವಾಸಮಾಡಿಕೊಂಡಿರುವ ಗಂಡ ಅಥವಾ ಹೆಂಡತಿ ವಿರುದ್ಧ ಸೂಕ್ತ ಡಿಕ್ರಿ ಅಥವಾ ಆದೇಶ ಮಾಡಿ ಪ್ರತ್ಯೇಕ ವಾಸಮಾಡಿಕೊಂಡಿರುವ ಗಂಡ ಅಥವಾ ಹೆಂಡತಿ ಒಟ್ಟಿಗೆ ಬಾಳುವಂತೆ ಸೂಕ್ತ ನಿರ್ದೇಶನ ನೀಡಬಹುದು.

(2) ಈ ಮೇಲ್ಕಾಣಿಸಿದ ಕಾನೂನಿನ ಅಧಿನಿಯಮದ ಪ್ರಾರಂಭಕ್ಕೆ ಮೊದಲು ಅಥವಾ ಅನಂತರ ಅನುಷ್ಠಾಪಿತವಾಗಿರುವ ವಿವಾಹಿತ ದಂಪತಿಗಳ ಪೈಕಿ ಯಾರಾದರೂ ಇಬ್ಬರು ಸಕಾರಣದಿಂದ ತನ್ನ ಗಂಡ ಅಥವಾ ಹೆಂಡತಿಯೊಂದಿಗಿನ ವೈವಾಹಿಕ ಸಂಬಂಧವನ್ನು ಮುಂದುವರಿಸುವ ಇರಾದೆ ಇಲ್ಲದಿರುವ ಸಂದರ್ಭದಲ್ಲಿ ನೋಂದಾಯಿತ ಗಂಡ ಅಥವಾ ಹೆಂಡತಿ ತನ್ನ ವಿವಾಹವನ್ನು ರದ್ದುಗೊಳಿಸಲು ಸೂಕ್ತ ವಿವಾಹ ವಿಚ್ಚೇದನ ಅರ್ಜಿಯನ್ನು ಸಂಬಂದಪಟ್ಟ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಲಯದಿಂದ ಸೂಕ್ತ ಡಿಕ್ರಿ ಅಥವಾ ಆದೇಶವನ್ನು ಪಡಕೊಳ್ಳಬಹುದು.

ಹಿಂದೂ ವಿವಾಹ ಅಧಿನಿಯಮ, 1955ರ ಪ್ರಕರ ಮೇಲ್ಕಾಣಿಸಿದ ರೀತಿಯ ಅರ್ಜಿಗಳನ್ನು ನೊಂದ ಗಂಡ ಅಥವಾ ಹೆಂಡತಿ ಈ ಕೆಳ ಕಾಣಿಸಿರುವ ಪ್ರದೇಶಗಳಿಗೆ ಅನುಗುಣವಾಗಿ ಅಧಿಕಾರವ್ಯಾಪ್ತಿ ಹೊಂದಿರುವ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಬಹುದು : (i) ವಿವಾಹ ಸಮಾರಂಭ ನಡೆದ ಅಥವಾ ನೋಂದಣಿಯಾಗಿರುವ ಪ್ರದೇಶ (ii) ಅರ್ಜಿಯನ್ನು ಸಲ್ಲಿಸುವ ಕಾಲದಲ್ಲಿ ನೊಂದಿರುವ ಗಂಡ ಅಥವಾ ಹೆಂಡತಿ ವಾಸಿಸುವ ಪ್ರದೇಶ (iii) ವಿವಾಹಿತ ದಂಪತಿಗಳು ಕಡೆಯದಾಗಿ ಜೊತೆಯಾಗಿ ವಾಸಿಸುತ್ತಿದ್ದ ಪ್ರದೇಶ.

ಈ ಮೇಲ್ಕಾಣಿಸಿದ ರೀತಿಯ ಅರ್ಜಿಗೆ ಸಂಬಂಧಪಟ್ಟ ವ್ಯವಹರಣೆಯ ವಿಚಾರಣೆಯ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಗಂಡ ಅಥವಾ ಹೆಂಡತಿ ತನ್ನ ಪೋಷಣೆಗೆ ಮತ್ತು ವ್ಯವಹರಣೆಯ ಅವಶ್ಯಕ ವೆಚ್ಚಗಳಿಗೆ ಸಾಕಾಗುವಷ್ಟು ಸ್ವತಂತ್ರ ಆದಾಯವನ್ನು ಹೊಂದಿಲ್ಲವೆಂದು ನ್ಯಾಯಾಲಯಕ್ಕೆ ಕಂಡುಬಂದರೆ, ಗಂಡ ಅಥವಾ ಹೆಂಡತಿಯ ಸ್ವಂತ ಆದಾಯ ಮತ್ತು ಸಂದರ್ಭಗಳನ್ನು ಅವಲೋಕಿಸಿ ಅರ್ಜಿಯ ಮೇಲೆ ವ್ಯವಹರಣೆಯ ವೆಚ್ಚಗಳನ್ನು ಅರ್ಜಿದಾರಿಗೆ ಪ್ರತ್ಯರ್ಜಿದಾರರಿಂದ ಕೊಡಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ ಮತ್ತು ಡಿಕ್ರಿಯನ್ನು ಮಾಡುವ ಕಾಲದಲ್ಲಿ ಅಥವಾ ತರುವಾಯ ಸಂದರ್ಭಕ್ಕೆ ಅನುಗುಣವಾಗಿ ಅರ್ಜಿದಾರ ಗಂಡ ಅಥವಾ ಹೆಂಡತಿಯ ಜೀವನಾಂಶ ಮತ್ತು ಪೋಷಣೆಗಾಗಿ ಶಾಶ್ವತ ನಿರ್ವಹಣಾ ವೆಚ್ಚ ಮತ್ತು ಜೀವನಾಂಶವನ್ನು ಅರ್ಜಿದಾರರಿಗೆ ಪ್ರತ್ಯರ್ಜಿದಾರರಿಂದ ಕೊಡಿಸುವ ಅಧಿಕಾರವನ್ನು ನ್ಯಾಯಾಲವು ಹೊಂದಿರುತ್ತದೆ ಮತ್ತು ಅವರಿಬ್ಬರ ನಡುವಿನ ಅಪ್ರಾಪ್ತ ವಯಸ್ಕ ಮಕ್ಕಳ ಅಭಿರಕ್ಷೆ, ಪೋಷಣೆ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಸೂಕ್ತ ಮದ್ಯಕಾಲೀನ (ತಾತ್ಕಾಲಿಕ) ಮತ್ತು ಶಾಶ್ವತ ಆದೇಶಗಳನ್ನು ಅರ್ಜಿದಾರರಿಗೆ ಅಪ್ರಾಪ್ತ ವಯಸ್ಕ ಮಕ್ಕಳ ಅಭಿರಕ್ಷೆ ಹೊಂದಿರುವ ಪ್ರತ್ಯರ್ಜಿದಾರರ ವಿರುದ್ದ ನೀಡಬಹುದು.







































error: Content is protected !!
Scroll to Top