ಕಾನೂನು ಕಣಜ : ಅಪರಾಧ ಕೃತ್ಯದ ವಿಚಾರಣೆಯಲ್ಲಿ ಪೊಲೀಸರ ಕರ್ತವ್ಯಗಳು

ಯಾವುದೇ ಒಂದು ಅಪರಾಧ ಕೃತ್ಯದ ಬಗ್ಗೆ ಮಾಹಿತಿಯನ್ನು ಪೊಲೀಸರು ನೇರವಾಗಿ ಅಥವಾ ದೂರುದಾರರ ಮೂಲಕ ಪಡೆದ ಕೂಡಲೆ ಅಂತಹ ಮಾಹಿತಿಯನ್ನು ಮೊದಲ ಮಾಹಿತಿ ವರದಿ (ಎಫ್.ಐ.ಆರ್.) ಎಂದು ಪರಿಗಣಿಸಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಆ ನಂತರ ಕೃತ್ಯದ ವಿಚಾರಣೆಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಮೊತ್ತ ಮೊದಲಾಗಿ ಅಪರಾಧ ಕೃತ್ಯದ ಮಾಹಿತಿಯನ್ನು ನೊಂದಾಯಿಸಿಕೊಂಡ ನಂತರ ಪೊಲೀಸರು ಕೃತ್ಯದ ಪರಿಸ್ಥಿತಿಗಳ ತನಿಖೆ ನಡೆಸುವುದಕ್ಕಾಗಿ ಕೃತ್ಯ ನಡೆದ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ಅಪರಾಧ ಕೃತ್ಯದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಪುರಾವೆ ಸಂಗ್ರಹಿಸಬೇಕಾಗುತ್ತದೆ. ಸ್ಥಳ ಪರಿಶೀಲನೆ ಸಮಯ ಪೊಲೀಸರು ಕೃತ್ಯ ನಡೆದ ಸ್ಥಳವನ್ನು ರಕ್ಷಿಸುವ ಉದ್ದೇಶದಿಂದ ಕೃತ್ಯದ ಸ್ಥಳಕ್ಕೆ ಬಂದಿರುವ ಎಲ್ಲ ಜನರನ್ನು ದೂರ ಸರಿಸಿ ಅಲ್ಲಿಯ ಭೌತಿಕ ಪುರಾವೆಗಳನ್ನು ನಾಶಪಡಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಅಪರಾಧದ ಕುರಿತು ಸಾಕ್ಷ್ಯಾಧಾರವನ್ನು ಕಲೆ ಹಾಕುವ ಮತ್ತು ರಕ್ಷಿಸುವ ಉದ್ದೇಶದಿಂದ ಪೊಲೀಸರು ಕೂಡಲೇ ಅಲ್ಲಿಯ ದೃಶ್ಯದ ಛಾಯಾಚಿತ್ರವನ್ನು ತೆಗೆದುಕೊಂಡು, ಕೃತ್ಯ ನಡೆದ ಸ್ಥಳದ ಕಚ್ಚಾ ನಕ್ಷೆಯನ್ನು ತಯಾರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಜನರ ವಿವರವನ್ನು ಪಡೆಯಬೇಕಾಗುತ್ತದೆ. ಸ್ಥಳದಲ್ಲಿ ಕೃತ್ಯಕ್ಕೆ ಉಪಯೋಗಿಸಿರುವ ಯಾವುದೇ ಆಯುಧ ಅಥವಾ ಅಪರಾಧಿಗಳು ಬಿಟ್ಟು ಹೋಗಿರುವ ಯಾವುದೇ ವಸ್ತು ಅಥವಾ ಚಹರೆಯನ್ನು ಪೊಲೀಸರು ಕೃತ್ಯದ ಸಾಕ್ಷ್ಯಾಧಾರಕ್ಕಾಗಿ ಮತ್ತು ಮುಂದಿನ ತನಿಖೆಗಾಗಿ ತಮ್ಮ ವಶ ಪಡೆದುಕೊಳ್ಳಬೇಕಾಗುತ್ತದೆ. ತಕ್ಷೀರು ಸ್ಥಳದಲ್ಲಿ ಯಾರಾದರೂ ಗಾಯಗೊಂಡ ವ್ಯಕ್ತಿಗಳಿದ್ದರೆ ಅವರ ಶರೀರದ ಮೇಲಿನ ಗಾಯಗಳನ್ನು ಪರೀಕ್ಷಿಸಿ ಬರೆದುಕೊಂಡು, ನಂತರ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಕೃತ್ಯ ನಡೆದ ಸ್ಥಳದಲ್ಲಿನ ಭೌತಿಕ ಪುರಾವೆಗಳನ್ನು ಗುರುತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿರುತ್ತದೆ. ಪೊಲೀಸರು ಗುರುತಿಸಿದ ಪುರಾವೆಗಳನ್ನು
ಅವುಗಳಿಗೆ ತಕ್ಕಂತೆ ಸಂಗ್ರಹಿಸಬೇಕಾಗುತ್ತದೆ. ಅವುಗಳನ್ನು ಪರೀಕ್ಷಿಸುವಾಗ ಮತ್ತು ಕಲೆ ಹಾಕುವಾಗ, ಅದರ ವಸ್ತು ಸ್ಥಿತಿ ಕೆಡದಂತೆ ಜಾಗರೂಕತೆ ವಹಿಸಬೇಕಾಗುತ್ತದೆ. ಆದ್ದರಿಂದ ನಿಯಂತ್ರಿತ ಅಥವಾ ಗೊತ್ತಿದ್ದ ಮಾದರಿಯ ಪುರಾವೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಗುರುತು ಹಾಕಿ ಛಾಯಾಚಿತ್ರ ತೆಗೆದು ದಾಖಲಿಸಿಕೊಳ್ಳಬೇಕಾಗುತ್ತದೆ. ಸಂಗ್ರಹಿಸಿದ ಪುರಾವೆಗಳನ್ನು ಅವುಗಳ ಪರಿಸ್ಥಿತಿ ಕೆಡದಂತೆ, ಮುರಿಯದಂತೆ, ಮತ್ತು ಒಡೆಯದಂತೆ ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಉದಾಹರಣೆಗೆ ರಕ್ತವನ್ನು ಗಾಜಿನ ಬಾಟಲಿಯಲ್ಲಿ ಹಾಕಿ ಹತ್ತಿಯನ್ನು ಇಟ್ಟು ಮುಚ್ಚಳವನ್ನು ಹಾಕಬೇಕು. ಆಯುಧಗಳನ್ನು ಡಬ್ಬಿಯಲ್ಲಿ ಇಡಬೇಕು. ಆದರೆ ಅವುಗಳ ಮೇಲಿದ್ದ ಬೆರಳಚ್ಚು ಇತ್ಯಾದಿಗಳು ಅಳಿಸದಂತೆ ಎಚ್ಚರಿಕೆ ವಹಿಸಬೇಕು. ಅನಂತರ ಸಂಬಂಧಪಟ್ಟ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಸೂಕ್ತ ವೈಜ್ಞಾನಿಕ ವಿಶ್ಲೇಷಣೆ ಮತ್ತು ವರದಿಗಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೃತ್ಯದ ತನಿಖೆಯ ಸಮಯ ತನಿಖಾಧಿಕಾರಿಯು ತನ್ನ ಸರಹದ್ದಿನಲ್ಲಿ ಬರತಕ್ಕಂತಹ ಯಾವುದೇ ಸ್ಥಳವನ್ನು ಅಪರಾಧ ಕೃತ್ಯಕ್ಕೆ ಸಂಬಂಧಪಟ್ಟ ವಸ್ತುಗಳಿಗಾಗಿ ಶೋಧನೆ ಮಾಡಬಹುದು. ತನಿಖೆಗೆ ಬೇಕಾದ ವಸ್ತುಗಳು ಇತರರ ಸ್ವಾಧೀನದಲ್ಲಿದ್ದರೆ, ಆ ತನಿಖಾಧಿಕಾರಿಯು ಅಂತಹ ವ್ಯಕ್ತಿಯನ್ನು ಶೋಧನೆ ಮಾಡಬಹುದು. ನಂತರ ತನಿಖಾಧಿಕಾರಿಯು ತನ್ನ ಶೋಧನೆಯ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಅಪರಾಧ ಕೃತ್ಯಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿಯನ್ನು ಹೊಂದಿರುವ ವ್ಯಕ್ತಿಗಳಿಂದ ಪೊಲೀಸರು ಮಾಹಿತಿಯನ್ನು ಪಡೆಯುವ ಉದ್ದೇಶಕ್ಕಾಗಿ ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಬಹುದಾಗಿದೆ. ಆದರೆ, ಈ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಅವನ ಮೇಲೆ ಬಲಪ್ರಯೋಗ ಮಾಡುವ ಅಧಿಕಾರವನ್ನು ಪೊಲೀಸರು ಹೊಂದಿರುವುದಿಲ್ಲ. ಕೃತ್ಯದ ತನಿಖೆಯ ನಂತರ, ಪೊಲೀಸರಿಗೆ ಆಪಾದಿತ ವ್ಯಕ್ತಿ ಕೃತ್ಯ ನಡೆಸಿದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿದ್ದರೆ, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಆತನನ್ನು ಬಿಡುಗಡೆ ಮಾಡಬಹುದು. ತನಿಖಾಧಿಕಾರಿಯು ಪ್ರತಿದಿನವೂ
ಯಾವುದೇ ಕ್ರಿಮಿನಲ್ ಪ್ರಕರಣದ ತನಿಖೆಯ ವ್ಯವಹರಣೆಗಳನ್ನು ತನ್ನ ದಿನಚರಿಯಲ್ಲಿ ಬರೆದಿಡಬೇಕಾಗುತ್ತದೆ. ಇದರಲ್ಲಿ ತನಿಖೆ ಪ್ರಾರಂಭಿಸಿದ ಸಮಯ, ಸಂದರ್ಶಿಸಿದ ಸ್ಥಳಗಳು ಸಾಕ್ಷೀದಾರರ ಹೆಸರುಗಳು ತನಿಖೆಯ ಪ್ರಗತಿ ಇತ್ಯಾದಿಗಳನ್ನು ಬರೆದಿಡಬೇಕಾಗುತ್ತದೆ. ಇದಕ್ಕೆ ವ್ಯವಹರಣೆಯ ದಿನಚರಿ ಇಲ್ಲವೆ ಸ್ಪೆಶಲ್ ಡಾಯರಿ ಎನ್ನುತ್ತಾರೆ.





























































































































error: Content is protected !!
Scroll to Top