ಉಡುಪಿ : ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿಚಾರ ತಣ್ಣಗಾದರೂ ಇದೀಗ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಎರಡು ವರ್ಷದ ಹಿಂದೆ ಗೇಟ್ ಮುಂದೆ ತಡೆದಿದ್ದ ಪ್ರಾಂಶುಪಾಲರ ರಾಜ್ಯ ಪ್ರಶಸ್ತಿಗೆ ಸರಕಾರ ತಡೆಯೊಡ್ಡಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ರಾಜ್ಯ ಸರಕಾರ ಅವಮಾನ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಉಡುಪಿಯಲ್ಲಿ ಆರಂಭವಾದ ಹಿಜಾಬ್ ಹೋರಾಟ ಸಂದರ್ಭ ಸರಕಾರ ಸಮಾನ ವಸ್ತ್ರ ಸಂಹಿತೆ ನಿಯಮ ಜಾರಿಗೆ ತಂದಿತ್ತು. ಈ ಸಂದರ್ಭ ಕಾಲೇಜಿಗೆ ಹಿಜಾಬ್ ತೊಟ್ಟು ಬಂದಿದ್ದ ವಿದ್ಯಾರ್ಥಿನಿಯರನ್ನು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಕಾಲೇಜಿನ ಗೇಟಿನಲ್ಲಿ ತಡೆದಿದ್ದರು.
ತಡೆ ಹಿಡಿಯುವಲ್ಲಿ ಯಶಸ್ವಿ
2024ರ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ರಾಮಕೃಷ್ಣ ಅವರಿಗೆ ಒಲಿದು ಬಂದಿತ್ತು. ಗುಣಮಟ್ಟದ ಶಿಕ್ಷಣ, ಶಿಸ್ತು ಬದ್ಧ ವೃತ್ತಿ, ಕಾಲೇಜಿನ ಫಲಿತಾಂಶ, ಜೀವಮಾನದ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯ ವಿರುದ್ಧ ಕೆಲ ಪ್ರಗತಿಪರರು, ಮುಸಲ್ಮಾನ ಸಮುದಾಯದ ಆಕ್ಟಿವಿಸ್ಟ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದು ನಿಯೋಗ ಈ ಬಗ್ಗೆ ಸರಕಾರಕ್ಕೆ ಒತ್ತಡ ತಂದು ಪ್ರಶಸ್ತಿ ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಆಕ್ಷೇಪ
ಈ ಬೆಳವಣಿಗೆ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದು ಜಿಲ್ಲೆಗೆ -ಶಿಕ್ಷಕರಿಗೆ ಮಾಡಿದ ಅವಮಾನ, ಸರಕಾರ ಕ್ಷಮೆ ಕೋರಬೇಕೆಂದು ಬಿಜೆಪಿಯ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಮುಂದಿನ ಎರಡು ಮೂರು ದಿನದಲ್ಲಿ ಈ ಬಗ್ಗೆ ಸರಕಾರ ಸೂಕ್ತ ನಿರ್ಧಾರ, ನಿಲುವು ಪ್ರಕಟಿಸದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.































































