ತಜ್ಞ ವೈದ್ಯರಿಲ್ಲದೆ ಬಳಲುತ್ತಿರುವ ಕಾರ್ಕಳ ತಾಲೂಕು ಆಸ್ಪತ್ರೆ

ಕಾರ್ಕಳ : ಕಾರ್ಕಳದಲ್ಲಿ ಸುಸಜ್ಜಿತ ತಾಲೂಕು ಸರಕಾರಿ ಆಸ್ಪತ್ರೆಯಿದೆ. ವೈದ್ಯಕೀಯ ಉಪಕರಣಗಳು ಸೇರಿ ಸಕಲ ಸೌಲಭ್ಯಗಳೂ ಇಲ್ಲಿವೆ. ಆದರೆ ಆಸ್ಪತ್ರೆಗೆ ಅವಶ್ಯವಾಗಿ ಬೇಕಾಗಿದ್ದ ತಜ್ಞ ವೈದ್ಯರು ಮಾತ್ರ ಇಲ್ಲ. ಹೀಗಾಗಿ ಸರಕಾರಿ ಆಸ್ಪತ್ರೆಯ ಪೂರ್ಣ ಪ್ರಯೋಜನ ಬಡ ಜನತೆಗೆ ಸಿಗದಂತಾಗಿದೆ.
ಮುಖ್ಯವಾಗಿ ಪ್ರಸೂತಿ ತಜ್ಞರಿಲ್ಲದೆ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಹೆರಿಗೆಗಾಗಿ ಮಹಿಳೆಯರು, ಉಡುಪಿ, ಮಣಿಪಾಲ, ಮಂಗಳೂರಿನಂಥ ದೂರದ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯವಾಗುತ್ತಿದೆ. ಕಳೆದ ಒಂದು ವರ್ಷದಿಂದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲದೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ.

ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ವಿಶೇಷ ಮುತುವರ್ಜಿಯಿಂದ ತಾಲೂಕು ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಗೊಂಡು 2019 ನವೆಂಬರ್‌ನಲ್ಲಿ ಉದ್ಘಾಟನೆಗೊಂಡಿತ್ತು. ಸುಸಜ್ಜಿತವಾದ ಕಟ್ಟಡ ವ್ಯವಸ್ಥೆಯೊಂದಿಗೆ ಆಧುನಿಕ ಸೌಲಭ್ಯವನ್ನು ಒದಗಿಸಿಕೊಡಲಾಯಿತು. ಐಸಿಯು, ಮಕ್ಕಳ ಐಸಿಯು, ಸ್ಕ್ಯಾನಿಂಗ್‌, ಲ್ಯಾಬ್‌ ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳಿದ್ದರೂ ಆಯಾಯ ತಜ್ಞರಿಲ್ಲದೇ ಅವುಗಳ ಬಳಕೆಯಾಗುತ್ತಿಲ್ಲ.

ಡಾ. ಗಣೇಶ್ ಭಟ್ ಸೇವೆ ಮರೆಯುವಂತಿಲ್ಲ
ಈ ಹಿಂದೆ ಡಾ. ಗಣೇಶ್‌ ಭಟ್‌ ಅವರು ಪ್ರಸೂತಿ ತಜ್ಞರಾಗಿ ಬಹಳ ಪ್ರಸಿದ್ಧಿ ಪಡೆದಿದ್ದರು. 2023ರ ಫೆ.1ರಂದು ಅವರನ್ನು ವರ್ಗಾವಣೆ ಮಾಡಲಾಯಿತು. ಸೇವಾ ಮನೋಭಾವ, ರೋಗಿಗಳ ಕುರಿತು ವಿಶೇಷ ಕಾಳಜಿ ಹೊಂದಿದ್ದ ಡಾ. ಗಣೇಶ್‌ ಅವರ ಸೇವೆಯನ್ನು ತಾಲೂಕಿನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅವರು ಪ್ರಸೂತಿ ತಜ್ಞರಾಗಿ ಸೇವೆಗೆ ಸೇರ್ಪಡೆಗೊಂಡ ಸಂದರ್ಭ ಕಾರ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ 50ರಷ್ಟು ಹೆರಿಗೆಯಾಗುತ್ತಿತ್ತು. ಆ ಬಳಿಕ ತಿಂಗಳಿಗೆ ಸರಾಸರಿ 100ರಿಂದ 150ರಷ್ಟು ಹೆರಿಗೆಗಳಾಗುತ್ತಿದ್ದವು. ಅಂದು ಕಾರ್ಕಳ ತಾಲೂಕಿನವರು ಮಾತ್ರವಲ್ಲದೇ ಬೆಳ್ತಂಗಡಿ, ಮೂಡುಬಿದಿರೆ, ಕಾಪು ಭಾಗದಿಂದಲೂ ಕಾರ್ಕಳ ಆಸ್ಪತ್ರೆಗೆ ಬರುತ್ತಿದ್ದರು.

ಶೂನ್ಯಕ್ಕೆ ತಲುಪಿದ ಹೆರಿಗೆ ದಾಖಲಾತಿ
ಗಣೇಶ್‌ ಭಟ್‌ ವರ್ಗಾವಣೆಯಾದ ಬಳಿಕ ಸ್ತ್ರೀರೋಗ ತಜ್ಞೆ ಡಾ. ನಾಗರತ್ನಾ ಹೆರಿಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭವೇ ಹೆರಿಗೆ ದಾಖಲಾತಿಯ ಸಂಖ್ಯೆ ಇಳಿಮುಖವಾಗಿತ್ತು. ಇದೀಗ ಪ್ರಸೂತಿ ತಜ್ಞರಿಲ್ಲದ ಕಾರಣ ಹೆರಿಗೆ ದಾಖಲಾತಿ ಶೂನ್ಯಕ್ಕೆ ತಲುಪಿದೆ. ವೈದ್ಯರಿಲ್ಲದ ಕಾರಣ ಬಡ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತಿದ್ದ ಸೌಲಭ್ಯಗಳು ಜನತೆಗೆ ಸಿಗದಂತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್‌ ಡೆಲಿವರಿಗೆ (ಆಸ್ಪತ್ರೆ ವೆಚ್ಚ ಹೊರತುಪಡಿಸಿ) ಸುಮಾರು 15 ಸಾವಿರದವರೆಗೆ ವೆಚ್ಚವಾಗುತ್ತದೆ. ಇದನ್ನು ಬಡಜನತೆಗೆ ಭರಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಮೂಳೆ ತಜ್ಞರಿಲ್ಲ
ಪ್ರಸೂತಿ ತಜ್ಞರು ಮಾತ್ರವಲ್ಲದೆ ಮೂಳೆ ತಜ್ಞರೂ ಇಲ್ಲ. ಈ ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಡಾ. ಕೆ.ಎಸ್.‌ ರಾವ್‌ ಕಾರ್ಯ ನಿರ್ವಹಿಸುತ್ತಿದ್ದರು. 2023ರ ಜುಲೈಯಲ್ಲಿ ಅವರು ಸೇವಾ ನಿವೃತ್ತಿ ಹೊಂದಿದ್ದು, ಆ ಬಳಿಕ ಆಸ್ಪತ್ರೆಗೆ ಮೂಳೆ ತಜ್ಞರ ನಿಯೋಜನೆಯಾಗಿಲ್ಲ. ಪ್ರತಿನಿತ್ಯ ಅಪಘಾತ ಇಲ್ಲ ಮತ್ಯಾವುದೋ ಕಾರಣದಿಂದ ಮೂಳೆ ಮುರಿತವಾಗಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಆದಾಗ್ಯೂ ಮೂಳೆ ತಜ್ಞರಿಲ್ಲದಿರುವ ಕಾರಣದಿಂದ ಸೂಕ್ತವಾದ ಚಿಕಿತ್ಸೆ ಅವರಿಗೆ ದೊರೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಸದ್ಯ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ, ಡಯಾಲಿಸಿಸ್‌ ಸೆಂಟರ್‌, ಆಯುಷ್ ಆಯುರ್ವೇದಿಕ್‌, ಮಾಮೂಲಿ ಜ್ವರ ಕೆಮ್ಮುಗೆ ಚಿಕಿತ್ಸೆ ಸರಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಸುಮಾರು 50 ಗ್ರಾಮಗಳನ್ನೊಳಗೊಂಡ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಿಲ್ಲದೆ ಇರುವುದು ವಿಷಾದನೀಯ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ, ಖಾಲಿಯಿರುವ ಹುದ್ದೆಗೆ ತಜ್ಞ ವೈದ್ಯರನ್ನು ನಿಯೋಜಿಸಿ ಜನತೆಗೆ ಸರಕಾರಿ ಸೇವೆ ದೊರೆಯುವಂತೆ ಮಾಡಬೇಕು.

ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಪ್ರಸೂತಿ ತಜ್ಞರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ವೈದ್ಯರ ನೇಮಕಗೊಳಿಸುವಂತೆ ಮೂರು ಬಾರಿ ಸಚಿವರಲ್ಲಿ ಮನವಿ ಮಾಡಿಕೊಂಡರೂ ಸ್ಪಂದನೆ ದೊರೆತಿಲ್ಲ.
– ವಿ. ಸುನಿಲ್ ಕುಮಾರ್
ಶಾಸಕರು



















































































error: Content is protected !!
Scroll to Top