ಶೇಖರ್‌ ಅಜೆಕಾರು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿದ ಹೃದಯವಂತ : ಗಂಗಾಧರ ಪಣಿಯೂರು

ಹೆಬ್ರಿ : ಶೇಖರ್ ಅಜೆಕಾರು ಮುಂಬಯಿ ಮತ್ತು ಕರ್ನಾಟಕದ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿದ ಹೃದಯವಂತ ಸಾಹಿತಿ. ಅವರೊಬ್ಬ ಅಪರೂಪದ ವಿಭಿನ್ನ ಯೋಜನೆ -ಯೋಚನೆಯ ಅದ್ಭುತ ಶಕ್ತಿ. ಅವರ ಹಾಗೆ ಕನ್ನಡ ಸರಸ್ವತಿಯ ಸೇವೆಯನ್ನು ಮಾಡಲು ಯಾರಿಗೂ ಅಸಾಧ್ಯ ಎಂದು ಮುಂಬಯಿಯ ನಿವೃತ್ತ ಬ್ಯಾಂಕ್‌ ಅಧಿಕಾರಿ ಗಂಗಾಧರ ಪಣಿಯೂರು ಹೇಳಿದರು.
ಅವರು ನ. 12ರಂದು ಅಜೆಕಾರು ರಾಮ ಮಂದಿರದಲ್ಲಿ ನಡೆದ ಇತ್ತೀಚೆಗೆ ನಿಧನರಾದ ಪತ್ರಕರ್ತ ಸಾಹಿತಿ ಶೇಖರ ಅಜೆಕಾರು ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವರ ಸಾಹಿತ್ಯದ ಸೇವೆಯನ್ನು ನಾವು ಮುಂದುವರೆಸುವ – ಗಣೇಶ್‌ ಕಾರ್ಣಿಕ್
ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಷ್ಟನ್‌ ಗಣೇಶ್‌ ಕಾರ್ಣಿಕ್‌ ಮಾತನಾಡಿ, ಶೇಖರ ಅಜೆಕಾರು ಅವರ ಕನ್ನಡ ಪ್ರೇಮ ಎಂದಿಗೂ ಮಾದರಿ. ಅವರ ಅದ್ಬುತ ಕಲ್ಪನೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿ ಗ್ರಾಮೋತ್ಸವವನ್ನು ನಾವು ಮುಂದುವರಿಸಿದಾಗ ಅವರ ಆತ್ಮಕ್ಕೆ ಶಾಂತಿ ದೊರೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಶೇಖರ್ ಅಜೆಕಾರ್‌ ಅವರ ಸಾಹಿತ್ಯದ ಸೇವೆಯನ್ನು ಮುಂದುವರೆಸುವ ಎಂದು ಹೇಳಿದರು.‌

ಸಾಹಿತಿ ಸಂಧ್ಯಾ ಶೆಣೈ, ಕಾಂಗ್ರೆಸ್‌ ಮುಖಂಡ ಉದಯ ಶೆಟ್ಟಿ ಮುನಿಯಾಲು, ಕವಯತ್ರಿ ಜ್ಯೋತಿ ಗುರುಪ್ರಸಾದ್‌, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್‌ ಹೆಚ್. ಪಿ. ಮಾತನಾಡಿ ಶೇಖರ ಅಜೆಕಾರು ಅವರಿಗೆ ನುಡಿನಮನ ಸಲ್ಲಿಸಿದರು. ಉಡುಪಿಯ ವಿಶ್ವನಾಥ ಶೆಣೈ, ಬೈಂದೂರಿನ ಪತ್ರಕರ್ತ ಸುನಿಲ್‌ ಬೈಂದೂರು, ಉಡುಪಿಯ ಪತ್ರಕರ್ತ ಜನಾರ್ಧನ್‌ ಕೊಡವೂರು ಶೇಖರ್‌ ಅಜೆಕಾರು ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಪತ್ರಕರ್ತ ವಸಂತ ಕುಮಾರ್‌, ಉಡುಪಿ ಮಲಬಾರ್‌ ಗೋಲ್ಡ್‌ ಡೈಮಂಡ್‌ನ ಹಫೀಜ್‌ ರೆಹಮಾನ್‌, ಶಾಂತಿರಾಜ್‌ ಜೈನ್‌, ನಂದ ಕುಮಾರ್‌ ಹೆಗ್ಡೆ, ರಾಮಕೃಷ್ಣ ಶೆಟ್ಟಿ, ಸುಂದರ ಶೆಟ್ಟಿ ಪಮ್ಮೋಟ್ಟು, ಗಣೇಶ್‌ ರಾಮ ಮಂದಿರ, ಪತ್ರಕರ್ತ ರಾಮ್‌ ಅಜೆಕಾರ್‌, ನರಸಿಂಹ ಪಂಚನಬೆಟ್ಟು, ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಸುಕುಮಾರ್‌ ಮುನಿಯಾಲ್‌ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುರಂದರ್ ಪುರೋಹಿತ್ ಮುನಿಯಾಲ್ ಕಾರ್ಯಕ್ರಮ ನಿರ್ವಹಿಸಿದರು.error: Content is protected !!
Scroll to Top