ಬೆಂಗಳೂರು : ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಗೊಳಿಸಿ ಎಸ್ಇಪಿಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಈ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು. ಆದರೆ ರಾಜ್ಯ ಸರಕಾರಕ್ಕೆ ಕೌಂಟರ್ ಕೊಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.
ಸರಕಾರ ಮುಂದಿನ ವರ್ಷದಿಂದ ಎನ್ಇಪಿ ರದ್ದುಪಡಿಸಲು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ನಮಗೆ ಎನ್ಇಪಿ ಬೇಕು, ಎಸ್ಇಪಿ ಬೇಡ ಅಂತ ಪಟ್ಟು ಹಿಡಿದಿವೆ. ಅಂತಾರಾಷ್ಟ್ರೀಯ ಮಕ್ಕಳ ಜೊತೆಗೆ ಸ್ಪರ್ಧಿಸಲು ಎನ್ಇಪಿ ಅಗತ್ಯವಿದೆ. ಎಸ್ಇಪಿ ಪಠ್ಯಕ್ರಮ ವ್ಯವಸ್ಥೆಯಿಂದ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗುತ್ತೆ. ಎನ್ಇಪಿ ಲೋಪ ದೋಷ ಸರಿಪಡಿಸಿಕೊಂಡು ಕೊಂಚ ಬದಲಾವಣೆ ಮಾಡಿಕೊಂಡು, ಎನ್ಇಪಿ ಮುಂದುವರೆಸಬೇಕು ಅಂತ ಖಾಸಗಿ ಶಾಲೆಗಳು ಒತ್ತಾಯ ಹೇರುತ್ತಿವೆ. ಇದರಿಂದ ಸರ್ಕಾರಕ್ಕೆ ಹೊಸ ಟೆನ್ಷನ್ ಶುರುವಾಗಿದೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಎನ್‌ಇಪಿಯನ್ನು ರದ್ದುಪಡಿಸುವುದಾಗಿ ಭರವಸೆ ನೀಡಿತ್ತು. ಬದಲಿಗೆ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ಅದರಂತೆ ಇದೀಗ ಎನ್ಇಪಿ ರದ್ದು ಮಾಡಲು ಸರಕಾರ ಯೋಜನೆ ರೂಪಿಸಿದೆ.































































