ಡ್ರಗ್ಸ್ ಅಡ್ಡೆ ಆಗುತ್ತಿರುವ ಲೇಟ್‌ನೈಟ್ ಹೋಟೆಲ್‌ಗಳು
ಉಡುಪಿ : ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಗಿ ಇಲ್ಲದೆ ಪಬ್‌ಗಳು ಬೇಕಾಬಿಟ್ಟಿಯಾಗಿ ವ್ಯಾಪಾರ ಮಾಡುತ್ತಿದ್ದು, ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಲಬ್, ಪಬ್, ಮಟ್ಕಾ ದಂಧೆ ನಿಲ್ಲಿಸಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್‌ನ ಹೆಸರಿನಲ್ಲಿ ಇಸ್ಪಿಟ್ ಕ್ಲಬ್‌ಗಳು ದಿನದ 24 ಗಂಟೆಯೂ ತೆರೆದಿರುವುದು ಗಮನಕ್ಕೆ ಬಂದಿರುತ್ತದೆ. ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಲೈಸೆನ್ಸ್ ಬಳಸಿಕೊಂಡು ಪಬ್‌ಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ನಡೆಸುತ್ತಿದ್ದು,ಈ ಚಟುವಟಿಕೆಗಳು ಕಾನೂನು ಬಾಹಿರವಾಗಿರುತ್ತವೆ.
ಬಂದ್ ಮಾಡಬೇಕಾದ ಸಮಯದ ನಂತರವೂ ಕೆಲವೊಂದು ಬಾರ್ ಮತ್ತು ರೆಸ್ಟೋರೆಂಟ್‌ಗಳು ಯಾವುದೇ ಅಳುಕು ಇಲ್ಲದೆ ವ್ಯಾಪಾರ ನಡೆಸಿಕೊಂಡು ಬಂದಿರುತ್ತವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ.
ಮಣಿಪಾಲದ ಡಿಸಿ ಕಚೇರಿ ರಸ್ತೆಯಲ್ಲಿರುವ ಕೆಲವು ರೆಸ್ಟೋರೆಂಟ್‌ಗಳು ಮುಂಜಾನೆ 3 ಗಂಟೆಯವರೆಗೂ ತೆರೆದಿರುತ್ತವೆ. ಮಣಿಪಾಲದ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್‌ಗಳು ಡ್ರಗ್ಸ್ ಸೇವನೆಯ ಅಡ್ಡೆಯಾಗುತ್ತಿವೆ. ಮಣಿಪಾಲ ಡ್ರಗ್ಸ್ ಕೇಂದ್ರವಾಗಿ ಬೆಳೆಯುತ್ತಿರುವುದು ಸ್ಥಳೀಯ ವಿದ್ಯಾರ್ಥಿಗಳು, ಸ್ಥಳೀಯ ಯುವಜನತೆ ಮತ್ತು ಹೊರ ಊರಿನಿಂದ ಮತ್ತು ಹೊರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಯುವಜನತೆಯ ಡ್ರಗ್ಸ್ ಹಾವಳಿಗೆ ದಾಸರಾಗುತ್ತಿದ್ದಾರೆ.
ಉಡುಪಿ ಮತ್ತು ಮಣಿಪಾಲದಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಪಬ್‌ಗಳು, ಕ್ಲಬ್‌ಗಳು ಮತ್ತು ಅವಧಿ ಮೀರಿ ವ್ಯವಹಾರ ನಡೆಸುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್ ವಿರುದ್ಧ ಮತ್ತು ವ್ಯಾಪಕ ಮಟ್ಕಾ ದಂಧೆಯನ್ನು ನಿರ್ದ್ಯಾಕ್ಷಿಣ್ಯವಾಗಿ ನಿಲ್ಲಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.































































