ಹಣ, ಒಡವೆ ದೋಚಲು ಸಂಬಂಧಿಕನಿಂದಲೇ ಕೃತ್ಯ
ಮಂಗಳೂರು : ಪುತ್ತೂರು ತಾಲೂಕಿನ ಬಡಗನ್ನೂರು ಎಂಬಲ್ಲಿ ಇಬ್ಬರು ಮಹಿಳೆಯರ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡ ಮಹಿಳೆಯರು ಪುತ್ತೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಡಗನ್ನೂರು ನಿವಾಸಿ ಸುಲೇಖಾ ಮತ್ತು ಅವರ ಮನೆಗೆ ಕೆಲಸಕ್ಕೆ ಬಂದ ಗಿರಿಜಾ ಹಲ್ಲೆಗೊಳಗಾದವರು. ಸುರೇಶ್ ನಾಯ್ಕ ಹಲ್ಲೆ ಮಾಡಿದ ಆರೋಪಿ. ಮಹಿಳೆಯರು ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಲೇಖಾ ಅವರ ದೂರದ ಸಂಬಂಧಿ ಸುರೇಶ್ ನಾಯ್ಕ, ಸುಲೇಖಾರ ಕುತ್ತಿಗೆಗೆ ಬಟ್ಟೆ ಸುತ್ತಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಗಿರಿಜಾ ಅವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಸುಲೇಖಾ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ. ಬಟ್ಟೆಲ್ಲಿ ಕುತ್ತಿಗೆಯನ್ನು ಬಿಗಿದು ಹಣ ಹಾಗೂ ಚಿನ್ನಾಭರಣಗಳ ಬಗ್ಗೆ ವಿಚಾರಿಸಿ, ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬುದಾಗಿ ಸುಲೇಖಾ ಅವರ ಸಂಬಂಧಿ ರವಿಚಂದ್ರ ಎಂಬವರು ದೂರು ದಾಖಲಿಸಿದ್ದಾರೆ.






























































