ಕಾರ್ಕಳ : ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ಅಂಗನವಾಡಿ ಕಾರ್ಯಕರ್ತೆಗೆ 5 ಲ.ರೂ. ವಂಚನೆ

ಕಾರ್ಕಳ : ಅಂಗನವಾಡಿ ಮೇಲ್ವಿಚಾರಕಿಯ ಹುದ್ದೆ ತೆಗೆದುಕೊಡಿಸುವುದಾಗಿ ನಂಬಿಸಿ ಮುಂಡ್ಕೂರು ಸಚ್ಚೇರಿಪೇಟೆಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬವರಿಗೆ ಬೆಂಗಳೂರಿನ ವ್ಯಕ್ತಿಯೊಬ್ಬ 5. ಲ.ರೂ. ವಂಚಿಸಿರುವ ಕುರಿತು ಜೂ. 1 ರಂದು ದೂರು ದಾಖಲಾಗಿದೆ.
ಶಶಿಕಲಾ ಅವರು ಹಲವಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದು, ಬೆಂಗಳೂರಿನಲ್ಲಿ ವೇಣುಗೋಪಾಲ ಎಂಬ ವ್ಯಕ್ತಿ ಅವರಿಗೆ ಅಂಗನವಾಡಿ ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಅದಕ್ಕೆ 2 ಲ.ರೂ. ಕೊಡಬೇಕು ಎಂದು ಹೇಳಿದ್ದಾನೆ. ಅವನ ಮಾತು ನಂಬಿ ಶಶಿಕಲಾ ಅವರು 2021 ನ. 16ರಂದು ತನ್ನಬ್ಯಾಂಕ್‌ ಖಾತೆಯಿಂದ 80 ಸಾವಿರ ರೂ. ತೆಗೆದುಕೊಟ್ಟಿದ್ದಾರೆ. ಬಳಿಕ 2021, ನ. 24ರಂದು 1 ಲಕ್ಷ, ನ. 25ರಂದು 25 ಸಾವಿರ, ಡಿ. 2ರಂದು 55,003, ಡಿ. 14 ಮತ್ತು ಡಿ. 20 ರಂದು ತಲಾ 10 ಸಾವಿರದಂತೆ ಐದು ಕಂತುಗಳಲ್ಲಿ 2,80,003 ರೂ. ವೇಣುಗೋಪಾಲನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಈ ನಡುವೆ 2021 ಡಿ. 23ರಂದು ಶಶಿಕಲಾ ಮನೆಗೆ ಬಂದ ವೇಣುಗೋಪಾಲ ಮಗಳಿಗೆ ಅಪಘಾತವಾಗಿದ್ದು, ಚಿಕಿತ್ಸೆಗೆ ತುರ್ತಾಗಿ ಹಣ ಬೇಕೆಂದು 2.20 ಲ.ರೂ. ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಮೇಲ್ವಿಚಾರಕಿ ಹುದ್ದೆಯನ್ನೂ ಕೊಡಿಸದೆ ಹಣವನ್ನೂ ವಾಪಸು ಕೊಡದೆ ವಂಚಿಸಿದ್ದಾನೆ. ಶಶಿಕಲಾ ಅವರ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿ ಕರೆಗೂ ಸಿಗುತ್ತಿಲ್ಲ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.





























































































































error: Content is protected !!
Scroll to Top