ಬೆಟ್ಟಿಂಗ್‌ನಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ
ಮಣಿಪಾಲ : ಮಣಿಪಾಲದ ಲಾಡ್ಜೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಹೆರ್ಗಾ ಗ್ರಾಮದ ವಿನಾಯಕ ಪೈ (35) ಎಂದು ಗುರುತಿಸಲಾಗಿದೆ. ಇವರು 6 ತಿಂಗಳಿನಿಂದ ಯಾವುದೇ ಕೆಲಸವಿಲ್ಲದೆ ಇದ್ದು, ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರು. 2 ವರ್ಷಗಳ ಹಿಂದೆ ಲಿವರ್ ಸಮಸ್ಯೆ ಕಾಣಿಸಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಗುರುವಾರ (ಎ.12) ಬೆಳಿಗ್ಗೆ ವಿನಾಯಕ ಮನೆಗೆ ಬಂದು ವಾಪಾಸು ಹೋಗಿದ್ದು ಸಂಜೆ ತಂದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ವಿನಾಯಕ ರವರು ಮಣಿಪಾಲ ಸುಷ್ಮಾ ಲಾಡ್ಜ್ ನಲ್ಲಿ ಅಸ್ವಸ್ಥಗೊಂಡು ಬಿದ್ದಿರುವುದು ಕಂಡು ಬಂದಿದ್ದು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮೃತರ ತಂದೆ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಎಲ್ ಬೆಟ್ಟಿಂಗ್ ಗೀಳಿನಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


























