ಇಂದು ನಿರ್ಧಾರ ಪ್ರಕಟ ಸಾಧ್ಯತೆ
ಬೆಂಗಳೂರು : ಟಿಕೆಟ್ ವಂಚಿತ ಹಿರಿಯ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಪಕ್ಷ ಬಿಡುವುದು ಬಹುತೇಕ ಖಾತರಿಯಾಗಿದೆ. ಇಂದು ಡಿ.ಕೆ.ಶಿವಕುಮಾರ್ ಕಳಹಿಸಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ ಸವದಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವಿವರ ಬಹಿರಂಗವಾಗದಿದ್ದರೂ ಇಂದು ಸಂಜೆಯೊಳಗೆ ಸವದಿ ಪಕ್ಷಾಂತರ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.
ಸವದಿಯನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಹೆಬ್ಬಾಳ್ಕರ್ ಸಹೋದರನ ಜತೆಗೆ ಸವದಿ ಇಂದು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಹಿರಿಯ ಲಿಂಗಾಯತ ನಾಯಕರಾಗಿರುವ ಸವದಿ ನಿರ್ಗಮನ ಬಿಜೆಪಿಗಾದ ಹಿನ್ನಡೆ ಎನ್ನಲಾಗುತ್ತಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸವದಿ ಸೋತಿದ್ದರು. ಆದರೂ ಪಕ್ಷ ಅವರನ್ನು ಮೇಲ್ಮನೆಗೆ ಕಳುಹಿಸಿ ಬಳಿಕ ಉಪಮುಖ್ಯಮಂತ್ರಿ ಮಾಡಿತ್ತು.
ಆದರೆ ಈ ಸಲ ಸ್ಪರ್ಧಿಸಲು ಅವರಿಗೆ ಟಿಕೆಟ್ ಸಿಕ್ಕಿಲ್ಲ. ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಅವರಿಂದಾಗಿ ಸವದಿಗೆ ಟಿಕೆಟ್ ತಪ್ಪಿದೆ ಎನ್ನಲಾಗುತ್ತಿದೆ. ಜಾರಕಿಹೊಳಿ ತನ್ನ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಕೆಟ್ ಘೋಷಣೆಯಾದ ಬೆನ್ನಿಗೆ ಸವದಿ ಅಸಮಾಧಾನ ಹೊರಹಾಕಿದಾಗ ಕಾಂಗ್ರೆಸ್ ಹೆಬ್ಬಾಳ್ಕರ್ ಮೂಲಕ ಅವರನ್ನು ಸಂಪರ್ಕಿಸಿದೆ. ಬೆಳಗಾವಿಯಲ್ಲಿ ಸವದಿಯನ್ನು ಬಳಸಿಕೊಂಡು ಬಿಜೆಪಿಯನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ ಯೋಜನೆ.
























