ಶತಮಾನ ಕಂಡ ಶಾಲೆಯಲ್ಲಿದ್ದಾರೆ 500 ವಿದ್ಯಾರ್ಥಿಗಳು
ಹೆಬ್ರಿ : ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನದ ಭಾಗವಾಗಿ ಕೇಂದ್ರ ಸರಕಾರವು ದೇಶದಾದ್ಯಂತ ಪಿಎಂ ಶ್ರೀ ಯೋಜನೆಗೆ ಕೆಲವೊಂದು ಶಾಲೆಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಹೆಬ್ರಿಯ ಸ. ಮಾ. ಹಿ. ಪ್ರಾ. ಶಾಲೆ ಒಳಗೊಂಡಿದೆ. ಸ್ಮಾರ್ಟ್ ಲ್ಯಾಬ್, ಸ್ಮಾರ್ಟ್ ತರಗತಿ, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿ, ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆ, ಕೌಶಲ್ಯ, ಆವಿಷ್ಕಾರ, ಉತ್ತಮ ಮೂಲಕೌರ್ಯದೊಂದಿಗೆ ಸರ್ವತೋಮುಖ ಪ್ರಗತಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪಿಎಂಶ್ರೀ ಯೋಜನೆಗೆ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪೂರ್ಣಪ್ರಮಾಣದ ಪ್ರಗತಿ ಸಾಧಿಸಲು ಬೇಕಾದ ವಾತಾವರಣ ಕಲ್ಪಿಸಲಾಗುತ್ತಿದೆ.
ಈ ಯೋಜನೆಯಲ್ಲಿ ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ಅಡಿಪಾಯ, ಪೂರ್ವಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಡಿಪಾಯದ ವರ್ಷ (ಪ್ರಿ-ಸ್ಕೂಲ್ ಮತ್ತು 1, 2ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ. ಪೂರ್ವಸಿದ್ಧತೆ ಹಂತದಲ್ಲಿ (3ರಿಂದ 5ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ವಿಷಯ ಶಿಕ್ಷಕರನ್ನು ಮಧ್ಯಮ ಹಂತದಲ್ಲಿ (6ರಿಂದ 8ನೇ ತರಗತಿ) ಪರಿಚಯಿಸಬೇಕು. ಸೆಕೆಂಡರಿ ಹಂತ (9ರಿಂದ 12ನೇ ತರಗತಿ) ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನವೋದಯ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಈ ಯೋಜನೆಯಲ್ಲಿ ಮಾಡಲಾಗುತ್ತದೆ.

ಹೆಬ್ರಿ ಸ. ಮಾ. ಹಿ. ಪ್ರಾ. ಶಾಲೆ
ಹೆಬ್ರಿ ಸ. ಮಾ. ಹಿ. ಪ್ರಾ. ಶಾಲೆಗೆ 141 ವರ್ಷಗಳ (1882ರಲ್ಲಿ ಪ್ರಾರಂಭ) ಇತಿಹಾಸವಿದೆ. ಇಲ್ಲಿ 1 ರಿಂದ 8 ತರಗತಿಯಿದ್ದು 471 ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಮತ್ತು ವಿದ್ಯಾಭಿಮಾನಿಗಳ ಸಹಕಾರದಿಂದ 2016-17ರ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ಪ್ರಾರಂಭಿಸಲಾಗಿದೆ. ಪ್ರಸ್ತುತ ಎಲ್‌ಕೆಜಿಯಲ್ಲಿ 27 ಮತ್ತು ಯುಕೆಜಿಯಲ್ಲಿ 33 ವಿದ್ಯಾರ್ಥಿಗಳಿದ್ದಾರೆ.
ಖಾಯಂ ಶಿಕ್ಷಕರ ಬೇಡಿಕೆ
8 ಮಂದಿ ಖಾಯಂ ಶಿಕ್ಷಕರು ಇಲ್ಲಿ ಕಾರ್ಯನಿವರ್ಹಿಸುತ್ತಿದ್ದು ಇನ್ನೂ ಹೆಚ್ಚಿನ ಶಿಕ್ಷಕರ ಅವಶ್ಯಕತೆಯಿದೆ. ಕಳೆದ ಬಾರಿ ಇಬ್ಬರು ಶಿಕ್ಷಕರು ಭಡ್ತಿ ಹೊಂದಿ ವರ್ಗಾವಣೆಯಾಗಿದ್ದು ಅವರ ಬದಲಿಯಾಗಿ ಇಬ್ಬರು ಅತಿಥಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗಿತ್ತು. ಅಲ್ಲದೇ ಮುಂದಿನ ಜೂನ್ ತಿಂಗಳಿಗೆ ಇಲ್ಲಿಯ ಮುಖ್ಯ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ. ಎಲ್‌ಕೆಜಿ ಯುಕೆಜಿ ಸೇರಿದಂತೆ ಒಟ್ಟು 500 ವಿದ್ಯಾರ್ಥಿಗಳಿರುವ ಈ ಶಾಲೆಗೆ ಅವಶ್ಯವಾಗಿ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ.
ಶೈಕ್ಷಣಿಕ ಸಾಧನೆಯ ಪ್ರತೀಕ
ಪಿಎಂ ಶ್ರೀ ಯೋಜನೆಗೆ ಶಾಲೆ ಆಯ್ಕೆಯಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸಾಧನೆ, ಶಿಕ್ಷಕರ ಗುಣಮಟ್ಟದ ಬೋಧನೆ, ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಪೋಷಕರ ಪ್ರೋತ್ಸಾಹವೇ ಇದಕ್ಕೆ ಕಾರಣವಾಗಿದೆ. ಬದಲಾಗುತ್ತಿರುವ ಶಿಕ್ಷಣ ಪದ್ಧತಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶೈಕ್ಷಣಿಕ ಪರಿಕರಗಳು, ಖಾಯಂ ಶಿಕ್ಷಕರು ನೇಮಕವಾದಲ್ಲಿ ಶಾಲೆಗೆ ಮತ್ತಷ್ಟು ಅನುಕೂಲವಾಗುವುದು.
ಚಂಪಕ ಕೆ.
ಮುಖ್ಯ ಶಿಕ್ಷಕರು
ಗ್ರಾಮಕ್ಕೆ ಹೆಮ್ಮೆ
ಶತಮಾನಗಳ ಇತಿಹಾಸವಿರುವ ಶಾಲೆಯು ರಾಷ್ಟ್ರಮಟ್ಟದ ಯೋಜನೆಗೆ ಆಯ್ಕೆಯಾಗಿರುವುದು ಹೆಬ್ರಿ ಗ್ರಾಮಕ್ಕೆ ಹೆಮ್ಮೆಯ ವಿಚಾರ. ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸ ನೀಡಿರುವ ನಮ್ಮ ಶಾಲೆ ಸರಕಾರದ ಅನುದಾನ ಮತ್ತು ದಾನಿಗಳ ನೆರವಿನಿಂದ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ಈ ಯೋಜನೆಯಡಿಯಲ್ಲಿ ಶಾಲೆ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ.
ತಿಪ್ಪೆಸ್ವಾಮಿ
ಅಧ್ಯಕ್ಷರು, ಎಸ್‌ಡಿಎಂಸಿ
ಜಿಲ್ಲೆಯ 4 ಶಾಲೆಗಳು ಆಯ್ಕೆ
ಪಿಎಂ ಶ್ರೀ ಯೋಜನೆಗೆ ಕರ್ನಾಟಕದ 129 ಶಾಲೆಗಳು, ಉಡುಪಿ ಜಿಲ್ಲೆಯ 4 ಶಾಲೆಗಳು ಆಯ್ಕೆಗೊಂಡಿದೆ. ಹೆಬ್ರಿ ಸ. ಮಾ. ಹಿ. ಪ್ರಾ. ಶಾಲೆ, ಉಡುಪಿಯ ಕುಕ್ಕೆಹಳ್ಳಿ ಸ. ಹಿ. ಪ್ರಾ. ಶಾಲೆ, ಬೈಂದೂರಿನ ಶಿರೂರು ಸ. ಹಿ. ಪ್ರಾ. ಶಾಲೆ ಮತ್ತು ಕುಂದಾಪುರದ ತೆಕ್ಕಟ್ಟೆ ಸ. ಹಿ. ಪ್ರಾ. ಶಾಲೆ ಹಾಗೂ ದ. ಕ. ಜಿಲ್ಲೆಯಿಂದ 8 ಶಾಲೆ ಈ ಪಟ್ಟಿಯಲ್ಲಿದೆ. ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಎನ್ನುವ ಸ್ಕೀಂನಲ್ಲಿ ದೇಶದಲ್ಲಿ ಒಟ್ಟು 14, 500 ಶಾಲೆಯನ್ನು ಈ ಯೋಜನೆಯಡಿ ಗುರುತಿಸಲಾಗಿದೆ.
ಶಾಲೆಯ ಆಯ್ಕೆ
ಎಲ್ಲಾ ಜಿಲ್ಲೆಯಿಂದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆನ್‌ಲೈನ್ ಮೂಲಕ ಕೇಂದ್ರಕ್ಕೆ ಅಪ್‌ಲೋಡ್ ಮಾಡಲಾಗಿದೆ. ಕೇಂದ್ರದಿಂದ ಪರಿಶೀಲಿಸಿ, ಆಯಾ ಜಿಲ್ಲೆಗಳಲ್ಲಿ ಆಯ್ದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಆಯ್ಕೆಯಾಗಿರುವ ಶಾಲೆಗಳು ತಮ್ಮ ಶಾಲೆಗೆ ಅಗತ್ಯವಿರುವ ಭೌತಿಕ ಸೌಲಭ್ಯ ಹಾಗೂ ಪಠ್ಯ ಸಂಬಂಧಿತ ಪರಿಕರಗಳ ಬಗ್ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಕೇಂದ್ರ ಸರಕಾರ ಸೌಲಭ್ಯ ಒದಗಿಸಲಿದೆ.
ವರದಿ : ನಳಿನಿ ಎಸ್. ಸುವರ್ಣ
































































