ಪೊಲೀಸ್ ಠಾಣೆ ಸದೃಢಗೊಳಿಸುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಕಡಿವಾಣ – ಸುನೀಲ್ ಕುಮಾರ್
ಹೆಬ್ರಿ : ಆಧುನಿಕ ತಂತ್ರಜ್ಞಾನ, ಸುಧಾರಣೆ ಮೂಲಕ ಪೊಲೀಸ್ ಠಾಣೆಯನ್ನು ಸದೃಢಗೊಳಿಸಲಾಗುತ್ತಿದೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಸಮರ್ಥರಾಗಿದ್ದು ಜನತೆ ಅವರಿಗೆ ಸಹಕಾರ ನೀಡಬೇಕೆಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಸೋಮವಾರ ಹೆಬ್ರಿ ರಿಂಗ್ ರೋಡಿನ ಬಳಿ 2. 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೆಬ್ರಿಗೆ ನೂತನ ಪೊಲೀಸ್ ವಸತಿಗೃಹದ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ವಸತಿ ಗೃಹ ನಿರ್ಮಾಣ ಮಾಡಲಾಗುವುದು. ಪೊಲೀಸ್ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಇಲಾಖೆಗೆ, ಠಾಣೆಗೆ ಕೀರ್ತಿ ತರಬೇಕೆಂದು ಸುನೀಲ್ ಕುಮಾರ್ ಕಿವಿಮಾತು ಹೇಳಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಮಾತನಾಡಿದರು.

ಸನ್ಮಾನ
ಕಾರ್ಯಪಾಲ ಅಭಿಯಂತರರಾದ ಸಣ್ಣೇಗೌಡ, ಸಹಾಯಕ ಕಾರ್ಯಪಾಲ ಅಭಿಯಂತರ ಸಂಜೀವ ವಿ. ಮರಡ್ಡಿ, ಗುತ್ತಿಗೆದಾರ ಚರಣ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿ ತಾ.ಪಂ. ಇಒ ಶಶಿಧರ್ ಕೆ. ಜಿ., ಉದ್ಯಮಿ ದಿನೇಶ್ ಪೈ ಮುನಿಯಾಲು, ಶ್ರೀ ಅನಂತಪದ್ಮನಾಭ ದೇವಸ್ಥಾನದ ಮೊಕ್ತೇಸರ ಭಾಸ್ಕರ್ ಜೋಯಿಷ್, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಉದ್ಯಮಿ ಗುರುದಾಸ್ ಶೆಣೈ, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ನಿರೂಪಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ದಲಿಂಗಪ್ಪ ವಂದಿಸಿದರು.






























































