ಕುಚ್ಚೂರು : ಮತದಾನ ಬಹಿಷ್ಕಾರದ ಎಚ್ಚರಿಕೆ : ಮೂಲ ಸೌಕರ್ಯಕ್ಕಾಗಿ ಪ್ರತಿಭಟನೆ

ಹೆಬ್ರಿ : ನೀರು, ರಸ್ತೆ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದ ಘಟನೆ ಕುಚ್ಚೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಚ್ಚೂರು ಗ್ರಾಮದ ಮಾತ್ಕಲ್ ರಸ್ತೆ ಅಭಿವೃದ್ಧಿ 2 ದಶಕಗಳ ಬೇಡಿಕೆ. ಈ ರಸ್ತೆ ಅಭಿವೃದ್ಧಿಗೆ 2019 ರಲ್ಲಿ 1.5 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಬಳಿಕ 2022 ರಲ್ಲಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜನಪ್ರತಿನಿಧಿಗಳು ಸುಳ್ಳು ಹೇಳಿ ನಮ್ಮನ್ನು ಯಾಮಾರಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಪೈಪ್ ಮಾತ್ರ ಅಳವಡಿಸಿದ್ದು ಅದರಲ್ಲಿ ನೀರು ಇದುವರೆಗೂ ಬಂದಿಲ್ಲ. ಕುಡಿಯುವ ನೀರಿನ ಯೋಜನೆಗೂ 2.17 ಕೋಟಿ ಹಣ ಬಿಡುಗಡೆ ಆಗಿದೆ‌ ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಕಾಮಗಾರಿ ನಡೆದಿಲ್ಲ. ಇದರಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸುಧಾಕರ ಶೆಟ್ಟಿ ದೇವಳಬೈಲು ಆರೋಪಿಸಿದ್ದಾರೆ.

ಮತದಾನ ಬಹಿಷ್ಕಾರ
ಕಾಮಗಾರಿ ಮಂಜೂರಾಗಿದೆ ಎಂದು 2 ತಿಂಗಳ ಹಿಂದೆ ಬೋರ್ಡು ಅಳವಡಿಸಲಾಗಿದೆ. ಆದರೆ ಯಾವೂದೇ ಕಾಮಗಾರಿ ನಡೆದಿಲ್ಲ. ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ. ಸಚಿವ ಸುನಿಲ್‌ ಕುಮಾರ್‌ ಯಾವುದೇ ಅಭಿವೃದ್ಧಿ ಕೆಲಸ ಕುಚ್ಚೂರು ಪರಿಸರದಲ್ಲಿ ಮಾಡಿಲ್ಲ. ೫೦ ಲಕ್ಷ ರೂ. ವೆಚ್ಚದಲ್ಲಿ ಡಾಂಬಾರು ರಸ್ತೆ ಮಾಡುತ್ತೇವೆ ಎಂದು ಈ ಹಿಂದೆ ಹೇಳಿದ್ದರು. ಕುಚ್ಚೂರು ಗ್ರಾಮಸ್ಥರೆಲ್ಲರೂ ಸೇರಿ ಸಾರ್ವಜನಿಕ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯ ಮುಖಂಡ ದೇವಳಬೈಲು ಸುಧಾಕರ ಶೆಟ್ಟಿ ಹೇಳಿದರು.

ತಾರತಮ್ಯದ ಧೋರಣೆ
ಕಳೆದ 80 ವರ್ಷಗಳಿಂದ ನಮ್ಮದು ಇದೇ ಸ್ಥಿತಿ. ನಮ್ಮ ರಸ್ತೆಯಲ್ಲಿ ಹೋಗುವುದೆಂದರೆ ಅದು ಸಾಹಸವೇ ಸರಿ. ಕುಚ್ಚೂರು ಗ್ರಾಮ ಪಂಚಾಯತ್‌ ಪಕ್ಷೇತರರ ಆಡಳಿತದಲ್ಲಿರುವುದರಿಂದ ಸಚಿವರು ಕುಚ್ಚೂರು ಗ್ರಾಮದಲ್ಲಿ ರಸ್ತೆ ಕುಡಿಯುವ ನೀರು ಸಹಿತ ಯಾವುದೇ ಅಭಿವೃದ್ಧಿ ಕೆಲಸಕ್ಕೂ ಅನುದಾನ ನೀಡದೆ ತಾರತಮ್ಯ ನಡೆಸುತ್ತಿದ್ದಾರೆ ಎಂದು ಹಿರಿಯರಾದ ಶಿವರಾಮ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಕುಚ್ಚೂರು ಪರಿಸರದಲ್ಲಿ 15 ಕಿ.ಮೀ. ವ್ಯಾಪ್ತಿಯಲ್ಲಿ ಎರಡ್ಮೂರು ಕಿ.ಮೀ. ಮಾತ್ರ ಡಾಂಬಾರು ರಸ್ತೆಯಿದೆ. ಉಳಿದ ಎಲ್ಲೂ ರಸ್ತೆಗಳೇ ಇಲ್ಲ ಎಂದು ಪತ್ರಿಕಾ ವಿತರಕ ನಿತೀನ್‌ ಹೇಳಿದರು.‌ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ದೀಕ್ಷಿತ್‌ ನಾಯಕ್‌, ನಾಗರಾಜ ನಾಯ್ಕ್‌, ಸುಧೀರ ನಾಯಕ್‌, ವಿಶ್ವನಾಥ ದೇವಳಬೈಲು, ಮಹೇಶ ನಾಯ್ಕ್‌, ಪ್ರಸನ್ನ ಶೆಟ್ಟಿ, ಶ್ರೀಧರ ನಾಯ್ಕ್‌ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.





























































































































error: Content is protected !!
Scroll to Top