ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕ್ರಿಮಿನಲ್ ಅಥವಾ ಅಪರಾಧಿಕ ಕೃತ್ಯದ ಆಪಾದನೆಯನ್ನು ಹೊರಿಸಿದ ಮಾತ್ರಕ್ಕೆ ಆತನನ್ನು ಅಪರಾಧಿ ಅಥವಾ ತಪ್ಪಿತಸ್ಥ ಎಂದು ಪರಿಗಣಿಸಕೂಡದು. ವ್ಯಕ್ತಿಯ ಮೇಲಿನ ಅಪರಾಧಿಕ ಕೃತ್ಯದ ಆಪಾದನೆಯ ಕುರಿತು ಸಂಬಂಧಪಟ್ಟ ನ್ಯಾಯಾಲಯವು ತನಿಖೆ ನಡೆಸಿದ ನಂತರ ಆತನು ತಪ್ಪಿತಸ್ಥ ಅಥವಾ ಅಪರಾಧಿ ಎಂಬುದಾಗಿ ಸಾಬೀತಾಗಿರುತ್ತದೆ ಎಂಬುದಾಗಿ ನ್ಯಾಯಾಲಯವು ತೀರ್ಮಾನಿಸುವವರೆಗೆ ಕಾನೂನಿನ ದೃಷ್ಟಿಯಲ್ಲಿ ಅಂತಹ ವ್ಯಕ್ತಿ ಕೇವಲ ಕ್ರಿಮಿನಲ್ ಆಪಾದನೆ ಹೊಂದಿರುವ ವ್ಯಕ್ತಿ ಮಾತ್ರನಾಗಿರುವನು ಹೊರತು ಕಾನೂನಿನ ದೃಷ್ಟಿಯಲ್ಲಿ ಆತನು ಕ್ರಿಮಿನಲ್ ಅಪರಾಧಿಯಾಗಿರುವುದಿಲ್ಲ ಎಂಬುವುದು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ಕಾನೂನಿನ ಮುಖ್ಯ ನಿಯಮ ಹಾಗೂ ತತ್ವವಾಗಿರುತ್ತದೆ. ಹೀಗಾಗಿ ಅಪರಾಧಿಕ ಕೃತ್ಯದ ಆಪಾದನೆಯನ್ನು ಎದುರಿಸುವ ಯಾವುದೇ ವ್ಯಕ್ತಿಯು ಜಾಮೀನಿನ ಮೂಲಕ ಬಿಡುಗಡೆಹೊಂದಿ ತನ್ನ ಮೇಲಿನ ಆಪಾದನೆಯ ವಿರುದ್ಧ ನ್ಯಾಯೋಚಿತವಾಗಿ ಕಾನೂನಿನ ಹೋರಾಟವನ್ನು ನಡೆಸುವ ಹಾಗೂ ತಾನು ನಿರಪರಾಧಿ ಎಂಬುವುದನ್ನು ಸಾಬೀತುಪಡಿಸುವ ಕಾನೂನು ಬದ್ಧ ಹಕ್ಕನ್ನು ಹೊಂದಿರುತ್ತಾನೆ. ಒಬ್ಬ ನಿರಪರಾಧಿ ವ್ಯಕ್ತಿಯ ಮೇಲೆ ಅನಾವಶ್ಯಕವಾಗಿ ಸುಳ್ಳು ಆಪಾದನೆಗಳನ್ನು ಮಾಡಿ ಆತನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸುವುದು ಸಹ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ.
ಯಾವುದೇ ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸಲು ಹಲವಾರು ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಅಪರಾಧ ನಡೆಯುವ ಸ್ಥಳ, ಘಟನೆಯನ್ನು ನೋಡಿರುವ ಪ್ರತ್ಯಕ್ಷ ಸಾಕ್ಷಿಗಳ ಹಿನ್ನಲೆ, ದೃಷ್ಟಿ ಮತ್ತು ಸ್ಥಿತಿ, ಬೆಳಕಿನ ವ್ಯವಸ್ಥೆ, ಘಟನೆಯನ್ನು ನೋಡಿದ ಸ್ಥಳದ ಅಂತರ, ಅಪರಾಧಿಯ ಗುರುತು ಪತ್ತೆ, ಘಟನೆಗೆ ಕಾರಣದ ಅಪರಾಧಿಯು ಅಪರಾಧಿಕ ಕೃತ್ಯದಲ್ಲಿ ಬಳಸಲಾದ ಆಯುಧದ ಪತ್ತೆ, ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖಾಧಿಕಾರಿಯು ಸಂಗ್ರಹಿಸಿದ ಮಾಹಿತಿ ಮತ್ತು ಸಾಕ್ಷಾಧಾರಗಳ ಮೂಲ ಮತ್ತು ಸ್ವರೂಪ ಇತ್ಯಾದಿಗಳು ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿಯ ಮೇಲಿನ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿಕ ಅಥವಾ ಕ್ರಿಮಿನಲ್ ಕೃತ್ಯವನ್ನು ಮಾಡಿರಬಹುದೆಂಬ ಸಂಶಯಕ್ಕೊಳಗಾದ ಹಾಗೂ ಪ್ರಕರಣದಲ್ಲಿ ಆತನು ಭಾಗಿಯಾಗಿರುವ ಬಗ್ಗೆ ನಿಖರವಾದ ಮಾಹಿತಿ ಹೊಂದಿರದ ವ್ಯಕ್ತಿಯನ್ನು ಶಂಕಿತ ವ್ಯಕ್ತಿ ಎಂದು ಪರಿಗಣಿಸಬೇಕಾಗುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟ ಪ್ರತ್ಯಕ್ಷ ಸಾಕ್ಷಿಗಳಿಗೆ ಪರಿಚಯ ಇಲ್ಲದಿರುವ ಅಪರಾಧಿಯು ಕೃತ್ಯವನ್ನು ಎಸಗಿದ ತಕ್ಷಣ ಘಟನಾ ಸ್ಥಳದಿಂದ ಪರಾರಿಯಾದ ಸಂದರ್ಭದಲ್ಲಿ ಪೋಲಿಸರು ಅನುಮಾನದ ಮೇಲೆ ಶಂಕಿತ ವ್ಯಕ್ತಿಯನ್ನು ಸೆರೆಹಿಡಿದು ಆತನನ್ನು ಗುರುತಿಸುವ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ಅಪರಾಧ ಎಸಗಿದನೆಂದು ಹೇಳಲಾದ ವ್ಯಕ್ತಿಯ ಗುರುತು ಹಿಡಿಯುವ ಸಲುವಾಗಿ ಆತನನ್ನು ಇತರರೊಂದಿಗೆ ಒಬ್ಬರ ಪಕ್ಕದಲ್ಲಿ ಒಬ್ಬರನ್ನು ನಿಲ್ಲಿಸಿ ತಪ್ಪು ಮಾಡಿದನೆಂದು ಹೇಳಲಾದ ವ್ಯಕ್ತಿಯನ್ನು ಸಾಕ್ಷಿಗಳ ಮೂಲಕ ಗುರುತಿಸುವ ಪ್ರಕ್ರಿಯೆಯನ್ನು ನಡೆಸಿ ಅಪರಾಧಿಯನ್ನು ಗುರುತಿಸಬೇಕಾಗುತ್ತದೆ. ಯಾವುದೇ ಒಬ್ಬ ಆಪಾದಿತನ ಮೇಲಿನ ಆಪಾದನೆಗಳು ನ್ಯಾಯಾಲಯದಲ್ಲಿ ಸಾಬೀತು ಆಗುವ ತನಕ ಆತನನ್ನು ಮುಗ್ಧ ವ್ಯಕ್ತಿಯೆಂದೇ ಪರಿಗಣಿಸಬೇಕಾಗುತ್ತದೆ.

✒️ ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681
































































