ಕಾನೂನು ಕಣಜ : ಜೀವನಾಂಶ – ಕಾನೂನು ಮಾಹಿತಿ

1. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ತನ್ನ ಜೀವನವನ್ನು ಸಾಗಿಸಲು ಅವಶ್ಯಕವಾದಂತಹ ಆಹಾರ, ಔಷಧಿ, ಬಟ್ಟೆ, ಆಶ್ರಯ, ವಿಧ್ಯಾಭ್ಯಾಸ, ಇತ್ಯಾದಿಗಳ ಖರ್ಚುಗಳನ್ನು ನಿರ್ವಹಿಸಲು ಬೇಕಾಗುವ ಹಣದ ವ್ಯವಸ್ಥೆಗೆ ಜೀವನಾಂಶ ಎನ್ನುತ್ತಾರೆ. 

2. ಸಮಾಜದಲ್ಲಿನ ಪ್ರತಿಯೊಬ್ಬ ವಿವಾಹಿತ ಪತಿಯು ತನ್ನ ಪತ್ನಿಯನ್ನು, ಮತ್ತು ಅಪ್ರಾಯಸ್ಥ (ಮೈನರ್) ಮಕ್ಕಳನ್ನು, ಅದೇ ರೀತಿಯಾಗಿ ಆದಾಯ ಹೊಂದಿರುವ ವಯಸ್ಕ ಮಕ್ಕಳು, ಆದಾಯ ಹೊಂದಿರದ ತಮ್ಮ ತಂದೆ ಮತ್ತು ತಾಯಿಯನ್ನು, ಮತ್ತು ಅದೇ ರೀತಿಯಲ್ಲಿ ಹಿಂದು ಅವಿಭಾಜ್ಯ ಕುಟುಂಬದ ಮುಖ್ಯಸ್ಥನು ಆತನ ಮೇಲೆ ಅವಲಂಬಿತರಾಗಿರುವ ವಿಧವೆ ಸೊಸೆ, ಆಕೆಯ ಮಕ್ಕಳು, ಸದರಿ ಕುಟುಂಬದ ಮುಖ್ಯಸ್ಥನ ಸಹೋದರರ ಮಕ್ಕಳು ಮುಂತಾದವರನ್ನು ಸಂರಕ್ಷಿಸುವುದು ಅವರವರ ಸಾಮಾಜಿಕ ಮತ್ತು  ಕಾನೂನು ಬದ್ಧವಾದ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಧರ್ಮೀಯರಿಗೆ ಅನ್ವಯವಾಗುವಂತೆ ವಿವಿಧ ರೀತಿಯ ಕಾನೂನು ಅಂದರೆ  ಕ್ರಿಮಿನಲ್ ಪ್ರೊಸೀಜರ್ ಕೋಡ್, ಹಿಂದು ಮತ್ತು ಕ್ರಿಶ್ಚಿಯನ್ ಧರ್ಮೀಯರಿಗೆ ಸಂಬಂಧಪಟ್ಟ ವಿವಾಹದ ಕಾನೂನು ಹಾಗೂ ಮುಸ್ಲಿಂ ಧರ್ಮೀಯರಿಗೆ ಸಂಬಂಧಪಟ್ಟ ವಿಶೇಷವಾದ ಶರಿಯತ್ ಕಾನೂನು ಹಾಗೂ ಮುಸ್ಲಿಂ ವುಮನ್ ಪ್ರೊಟೆಕ್ಷನ್ ಆಫ್ ರೈಡ್ಸ್ ಆನ್ ಡೈವೊರ್ಸ್ ಆಕ್ಟ್- 1986 (ಮುಸ್ಲಿಂ ಮಹಿಳೆಯರ ವಿವಾಹ ವಿಚ್ಚೇದನೋತ್ತರ ಹಕ್ಕುಗಳ ರಕ್ಷಣೆ ಅಧಿನಿಯಮ- 1986)   ಹಾಗೂ ಸಮಾಜದ ಎಲ್ಲಾ ಧರ್ಮೀಯರಿಗೆ ಅನ್ವಯಿಸುವ ಹಾಗೂ ಶೋಷಿತ ಮಹಿಳಾ ವರ್ಗದವರಿಗೆ ವರದಾನವಾದಂತಿರುವ  ಪ್ರೊಟೆಕ್ಷನ್ ಆಫ್ ವುಮನ್ ಫ್ರಮ್ ಡೊಮೆಸ್ಟಿಕ್ ವಯೊಲೆನ್ಸ್ ಆಕ್ಟ್-2005 (ಗೃಹ ಸಂಬಂಧೀ ಹಿಂಸೆಯಿಂದ ಮಹಿಳೆಯರ ರಕ್ಷಣೆ ಅಧಿನಿಯಮ- 2005) ಮುಂತಾದ ಕಾನೂನುಗಳನ್ನು ಶಾಸಕಾಂಗವು ಬಹಳ ಹಿಂದೆಯೇ ರಚಿಸಲಾಗಿದ್ದು ಈ ಪ್ರಕಾರ ನ್ಯಾಯೋಜಿತವಾಗಿ ಜೀವನಾಂಶ ಹೊಂದಲು ಅರ್ಹರಾಗಿದ್ದೂ ಸಹ ಅದನ್ನು ಹೊಂದುವಲ್ಲಿ ವಂಚಿತರಾಗಿರುವ ನೊಂದ ವ್ಯಕ್ತಿಗಳು/ಮಹಿಳೆಯರು ನೇರವಾಗಿ ಅಥವಾ ಯಾವುದಾದರೂ ನೋಂದಾಯಿತ ಸೇವಾ ಸಂಸ್ಥೆ ಮೂಲಕ  ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಿ, ಜೀವನಾಂಶವನ್ನು ನೀಡಬೇಕಾಗಿರುವ ವ್ಯಕ್ತಿಗೆ ನ್ಯಾಯಾಲಯದ ಆದೇಶ ಮೂಲಕ ಸೂಕ್ತ ನಿರ್ದೇಶನವನ್ನು ಕೊಡಿಸಿ ಜೀವನಾಂಶವನ್ನು ವಸೂಲು ಮಾಡುವ ಕಾನೂನು ಬದ್ಧ ಹಕ್ಕನ್ನು ಮತ್ತು ಅವಕಾಶವನ್ನು ಹೊಂದಿರುತ್ತಾರೆ. ಇದರಂತೆ ತನ್ನ ಗಂಡನಿಂದ ನಿರ್ಲಕ್ಷಿಸಲ್ಪಟ್ಟು ಸಕಾರಣದಿಂದ ತಾನು ಪ್ರತ್ಯೇಕವಾಗಿ ವಾಸ ಮಾಡಿಕೊಂಡು ಬರುವ ವಿವಾಹಿತ ಪತ್ನಿ, ಅಪ್ರಾಪ್ತ ವಯಸ್ಸಿನ (ಮೈನರ್) ಮಕ್ಕಳು, ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಲತೆ ಹೊಂದಿರುವ ಮಕ್ಕಳು ಹಾಗೂ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟು ತಮ್ಮ ಜೀವನವನ್ನು ಸಾಗಿಸಲು ಜೀವನಾಂಶದ ಅಗತ್ಯ ಹೊಂದಿರುವ ತಂದೆ- ತಾಯಿ ಮೇಲೆ ವಿವರಿಸಿದ ಕಾನೂನಿನ ಪ್ರಕಾರ ಜೀವನಾಂಶವನ್ನು ನ್ಯಾಯಸಮ್ಮತವಾಗಿ ಕೇಳಿ ಪಡೆಯಬಹುದಾಗಿದೆ. 

3. ಈ ಮೇಲ್ಕಾಣಿಸಿದ ಪ್ರಕಾರ ಜೀವನಾಂಶವನ್ನು ಪಡೆಯುವ ಬಗ್ಗೆ ಆದೇಶ ಹೊಂದಿದ ವ್ಯಕ್ತಿಯು ಜೀವನಾಂಶದ ಮೊತ್ತವನ್ನು ನ್ಯಾಯಾಲಯದ ಮೂಲಕ ವಸೂಲು ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಜೀವನಾಂಶ ನೀಡಬೇಕೆಂದು ನ್ಯಾಯಾಲಯದಿಂದ ನಿರ್ದೇಶಿತನಾದ ವ್ಯಕ್ತಿಯು ನ್ಯಾಯಾಲಯದ ಆದೇಶದ ಪ್ರಕಾರ ಜೀವನಾಂಶವನ್ನು ನೀಡಲು ತಪ್ಪಿದ್ದಲ್ಲಿ ಅಂತಹ ವ್ಯಕ್ತಿಯನ್ನು ನ್ಯಾಯಾಲಯವು ಸೆರೆಮನೆಗೆ (ಜೈಲಿಗೆ) ಕಳುಹಿಸಬಹುದಾಗಿದೆ ಅಥವಾ ಜೀವನಾಂಶವನ್ನು ನೀಡಬೇಕಾಗಿರುವ ವ್ಯಕ್ತಿ ಯಾವುದೇ ಸ್ಥಿರಾಸ್ತಿ ಅಥವಾ ಚರಾಸ್ತಿಯನ್ನು ಹೊಂದಿರುವ ಸಂದರ್ಭದಲ್ಲಿ ಆತನ ಸ್ಥಿರಾಸ್ತಿ ಅಥವಾ ಚರಾಸ್ತಿಯನ್ನು ನ್ಯಾಯಾಲಯದ ಆದೇಶ ಮೂಲಕ ಜಪ್ತಿ ಮಾಡಿ ಜೀವನಾಂಶದ ಹಣವನ್ನು ವಸೂಲು ಮಾಡಬಹುದಾಗಿದೆ.  

✒️ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

error: Content is protected !!
Scroll to Top