ದೀಪಾವಳಿ ಸಂಭ್ರಮಿಸಲು ಕಾರ್ಗಿಲ್ ತಲುಪಿದ ಪ್ರಧಾನಿ ಮೋದಿ

8 ವರ್ಷಗಳಿಂದ ಸೈನಿಕರೊಂದಿಗೆ ದೀಪಾವಳಿ ಆಚರಣೆ

ಶ್ರೀನಗರ(ಅ.24): ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿ ಆಚರಣೆಗೆ ಅಕ್ಟೋಬರ್ 24 ರಂದು ಕಾರ್ಗಿಲ್ ತಲುಪಿದ್ದಾರೆ. ಕಳೆದ ಎಂಟು ವರ್ಷಗಳಿಂದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸುತ್ತಿದ್ದಾರೆ.

ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಿಸುತ್ತಿರುವ ಪ್ರಧಾನಿ
ಪ್ರಧಾನಿಯಾದ ನಂತರ ಮೋದಿ ಅವರು ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಿಸುತ್ತಿದ್ದಾರೆ. ಮೊದಲ ಬಾರಿಗೆ ಸಿಯಾಚಿನ್‌ನಲ್ಲಿ ಸೈನಿಕರೊಂದಿಗೆ ಮೊದಲ ದೀಪಾವಳಿಯನ್ನು ಆಚರಿಸಿದ್ದರು. 2015 ರಲ್ಲಿ ಪಂಜಾಬ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದು ಆ ಸಂದರ್ಭದಲ್ಲಿ ಅವರು 1965 ರ ಯುದ್ಧದ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ದೀಪಾವಳಿ ಆಚರಿಸಲು ಮೋದಿ ಹಿಮಾಚಲದ ಕಿನ್ನೌರ್‌ಗೆ ತೆರಳಿದ್ದರು. ಇಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.

ಸೈನಿಕರೊಂದಿಗೆ ದೀಪಾವಳಿ ಸಂಭ್ರಮಿಸಲು ಕಾರ್ಗಿಲ್‌ ತಲುಪಿದ ಮೋದಿ

2017ರಲ್ಲಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದ ಮೋದಿ, ಈ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್ ತಲುಪಿದ್ದರು. 2018 ರಲ್ಲಿ, ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸರೊಂದಿಗೆ ದೀಪಾವಳಿಯನ್ನು ಆಚರಿಸಿದರೆ 2019 ರಲ್ಲಿ ಎಲ್ಒಸಿಯಲ್ಲಿ ಸೈನಿಕರೊಂದಿಗೆ ಆಚರಿಸಿದ್ದರು. ಈ ವೇಳೆ, ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಸೈನಿಕರನ್ನು ಭೇಟಿ ಮಾಡಲು ಮೋದಿ ರಜೌರಿಗೆ ತೆರಳಿದ್ದರು. ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ, 2020 ರಲ್ಲಿ, ಪ್ರಧಾನಿಯವರು ಜೈಸಲ್ಮೇರ್‌ನ ಲೋಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ಆಚರಿಸಿದ್ದರು

Latest Articles

error: Content is protected !!