ಹೆಬ್ರಿ : ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಜನನಾಯಕರ ಅವಿರತ ಶ್ರಮದಿಂದಾಗಿ ಬಿಜೆಪಿಗೆ ಅಭೂತಪೂರ್ವ ಗೆಲವು ದೊರೆತಿದೆ. ಯಾವೂದೇ ಫಲಾಫೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿದವರಿಗೆ, ಅಭಿವೃದ್ಧಿಯನ್ನು ಬೆಂಬಲಿಸಿ ಬಿಜೆಪಿಗೆ ಮತನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಶಿವಪುರದಲ್ಲಿ ಶನಿವಾರ ಕೆರೆಬೆಟ್ಟು ಶಿವಪುರ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಮತದಾರರು, ಕಾರ್ಯಕರ್ತರು ಮತ್ತು ನೂತನ ಪಂಚಾಯತ್ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾರತಮ್ಯ ಮಾಡಿಲ್ಲ
ಕಳೆದ ೧೦ ವರ್ಷದ ಹಿಂದಿನ ಕಾರ್ಕಳಕ್ಕೂ ಇಂದಿನ ಕಾರ್ಕಳವನ್ನು ಅವಲೋಕಿಸಿದರೆ ಅಮೂಲಾಗ್ರ ಬದಲಾವಣೆಯಾಗಿದೆ. ಅಭಿವೃದ್ಧಿಯಲ್ಲಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಹಳ್ಳಿಹಳ್ಳಿಗೂ ಕಾಂಕ್ರೀಟ್ ರಸ್ತೆಯನ್ನು ಮಾಡಿದ್ದೇವೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಶಿವಪುರದ ಬಿಜೆಪಿಯ ನಾಯಕ ಹುಣ್ಸೆಯಡಿ ಸುರೇಶ ಶೆಟ್ಟಿ ಮಾತನಾಡಿ, ಶಿವಪುರ ಕೆರೆಬೆಟ್ಟು ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ೨೫ ಕೋಟಿಗೂ ಮಿಕ್ಕಿದ ಅನುದಾನ ಬಿಡುಗಡೆಗೊಂಡಿದೆ. ಜನತೆಗೆ ನಮ್ಮ ಮೇಲೆ ಭರವಸೆಯಿಟ್ಟು ಅಧಿಕಾರ ನೀಡಿದ್ದಾರೆ. ಸಾಕಷ್ಟು ಅಪಪ್ರಚಾರದ ನಡುವೆಯೂ ನಮಗೆ ಮತದಾರರ ಆಶೀರ್ವಾದ ದೊರೆತಿರುವುದು ಜನಸೇವೆಗೆ ಮತ್ತಷ್ಟು ಪ್ರೇರಣೆ ಎಂದರು.
ನೂತನ ಪಂಚಾಯಿತಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಶಿವಪುರ ಗ್ರಾಮದ ಖಜಾನೆ ಮತ್ತು ಕೆಳಖಜಾನೆಯ ವಿವಿಧ ಬೇಡಿಕೆ ಈಡೇರಿಸಿದ ಶಾಸಕ ಸುನೀಲ್ ಕುಮಾರ್ ಮತ್ತು ಸುರೇಶ ಶೆಟ್ಟಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹಿರಿಯ ಬಿಜೆಪಿ ನಾಯಕ ಎಂ.ಕೆ. ವಿಜಯ ಕುಮಾರ್, ಕಾರ್ಕಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಹೆಬ್ರಿ ಬಿಜೆಪಿ ಉಸ್ತುವಾರಿ ಎಚ್. ಗುರುದಾಸ ಶೆಣೈ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.






























































