ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ-
ದೊಣಗು ಬಾಯಿಗೆ ನೀರನೊಡ್ಡಲ್ ಅದನವನು
ತನಗಿಂತ ಕೆಲದ ಭಟನಿಗದು ಸಲ್ವದೆಂದಿತ್ತು,

ತಣಿವನಾಂತಹುದ ನೆನೆಯೊ-ಮಂಕುತಿಮ್ಮ
ಸೇನಾಪತಿ ಸಿಡ್ನಿಯ ಬಾಯಾರಿ ಒಣಗಿದ ಬಾಯಿಗೆ ಸೇವಕ ಕುಡಿಯಲು ನೀರನ್ನು ಒಡ್ಡಿದಾಗ, ಅದನವನು ಹತ್ತಿರದಲ್ಲಿ ಬಾಯಾರಿ ದೈನ್ಯದಿಂದ ನೋಡುತ್ತಿರುವ ತನ್ನ ಕೈ ಕೆಳಗೆ ಹೋರಾಡುವ ಸಾಮಾನ್ಯ ಸೈನಿಕನಿಗೆ ಕೊಟ್ಟು ತಾನು ತೃಪ್ತನಾಗುತ್ತಾನೆ.ಇಂತಹ ಗುಣವನ್ನು ನಾವು ಸದಾ ನೆನೆಯಬೇಕು ಎಂದಿದ್ದಾರೆ.
ಇಲ್ಲಿ ಬರುವ ಸರ್ ಪಿಲಿಫ್ ಸಿಡ್ನಿ ಇಂಗ್ಲೆಂಡ್ ನ ಅಪ್ರತಿಮ ಸೇನಾನಿ.ಹದಿನಾರನೆಯ ಶತಮಾನದಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಸುದೀರ್ಘ ಕದನದಲ್ಲಿ ದೇಶಕ್ಕಾಗಿ ಹೋರಾಡುತ್ತಲೆ ಹುತಾತ್ಮನಾದವನು. ಸಾಯುವ ಸ್ಥಿತಿಯಲ್ಲಿಯೂ ಜಗತ್ತಿಗೆ ಅದ್ಭುತ ಸಂದೇಶವನ್ನು ಕೊಟ್ಟ ಸಿಡ್ನಿಯನ್ನು ಜಗತ್ತು ಎಂದಿಗೂ ಮರೆಯದು.
“ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು” ಎಂಬ ಸರ್ವಜ್ಞನ ನುಡಿ, “ದಯೆಯೆ ಧರ್ಮದ ಮೂಲ”ಎಂದ ಮಾನವತಾವಾದಿ ಬಸವಣ್ಣನ ವಚನ ಇದೆ ತತ್ವವನ್ನು ಸಾರುತ್ತವೆ.ಇತರರ ಸಂತೋಷ ನಮ್ಮ ಸಂತೋಷ ಎಂದು ಭಾವಿಸಿದ ಹಾಗೆ ಇನ್ನೊಬ್ಬರ ನೋವು ಸಂಕಟವನ್ನೂ ನಮ್ಮದೆಂದು ಭಾವಿಸಿದರೆ ಸಮಾಜದಲ್ಲಿ ಬೆಂಕಿಯಿಡುವ ಸಂದರ್ಭ ಎಂದಿಗೂ ಬರುವುದಿಲ್ಲ ಅಲ್ಲವೆ?



































































