ಮಂಗಳೂರು,ಆ.24 :ನಗರದ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಗೆ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಡಿಸಿಜಿಐ ಅನುಮತಿ ಕೊಟ್ಟಿದೆ. ಈ ಮೂಲಕ ಈ ಆಸ್ಪತ್ರೆ ಕರಾವಳಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ಪಡೆದ ಕರಾವಳಿಯ ಮೊದಲ ಆಸ್ಪತ್ರೆ ಎನಿಸಿಕೊಂಡಿದೆ.
ಕಾಂಪೊನೆಂಟ್ ಮತ್ತು ಸಿಂಗಲ್ ಡೋನರ್ ಪ್ಲೇಟ್‌ಲೆಟ್ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ರಕ್ತ ಬ್ಯಾಂಕ್‌ನಂತಹ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿರುವುದು ಖಾತ್ರಿಯಾದ ನಂತರ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸಲು ಡಿಸಿಜಿಐ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅನುಮತಿ ನೀಡಿದೆ.
ಪ್ಲಾಸ್ಮಾಫೆರೆಸಿಸ್ ಕಾರ್ಯವಿಧಾನವನ್ನು ಕೈಗೊಳ್ಳಲು ರಕ್ತ ಬ್ಯಾಂಕ್‌ನಲ್ಲಿ ‘ಅಪೆರೆಸಿಸ್’ ಉಪಕರಣಗಳು, ಪರೀಕ್ಷಾ ಸೌಲಭ್ಯಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ. ಇದರೊಂದಿಗೆ, ಕರಾವಳಿ ಕರ್ನಾಟಕದಲ್ಲಿ ಪ್ಲಾಸ್ಮಾಫೆರೆಪಿಸಿಸ್ ನಡೆಸಲು ಪರವಾನಗಿ ಹೊಂದಿರುವ ಏಕೈಕ ರಕ್ತ ಬ್ಯಾಂಕ್ ನಿಟ್ಟೆ ಯೂನಿವರ್ಸಿಟಿ ಬ್ಲಡ್ ಬ್ಯಾಂಕ್ ಆಗಿದೆ.

ಕೊರೊನಾದಿಂದ ಚೇತರಿಸಿಕೊಂಡ 18 ವರ್ಷಕ್ಕಿಂತ ಮೇಲ್ಪಟ್ಟವರು, ಎಲ್ಲಾ ಪುರುಷ ಹಾಗೂ ಮಹಿಳೆಯರು ಪ್ಲಾಸ್ಮಾ ದಾನ ಮಾಡಬಹುದು. ಚೇತರಿಸಿಕೊಂಡ 28 ದಿನಗಳ ನಂತರ ಪ್ಲಾಸ್ಮಾ ದಾನ ಮಾಡಬೇಕು. ಕೊರೊನಾಕ್ಕೆ ಪ್ಲಾಸ್ಮಾ ಥೆರಪಿ ಹೊಸ ಚಿಕಿತ್ಸೆಯಾಗಿದೆ. ವೈರಸ್‌ನಿಂದ ತೀವ್ರವಾಗಿ ಸೋಂಕಿಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿ ಉತ್ತಮ ಪರಿಹಾರವೆಂದು ಕಂಡುಬಂದಿದೆ.






































































