ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ

ಹಿಂದಿ ಚಿತ್ರರಂಗ ಕಂಡ ಶ್ರೇಷ್ಠ ಗೀತೆ ರಚನೆಕಾರರಲ್ಲಿ ಶೈಲೇಂದ್ರ ಯಾನೆ ಶಂಕರ್ ದಾಸ್ ಕೇಸರಿ ಲಾಲ್ ಓರ್ವರು.ಭಾರತೀಯ ರೈಲ್ವೆಯಲ್ಲಿ ವೆಲ್ಡರ್ ಆಗಿದ್ದವರು.ಕೆಲಸದ ಜತೆ ಕವನ ಗೀಚುವ ಗೀಳಿತ್ತು.ಮುಶೈರಗಳಲ್ಲಿ ಭಾಗವಹಿಸುತ್ತಿದ್ದರು.ಇವರು ಕ್ರಾಂತಿಕಾರಿ ಕವಿಯಾಗಿದ್ದರು.ರಾಜ್ ಕಪೂರ್ ಗೆ ಇವರ ಕವನಗಳು ಇಷ್ಟವಾಗುತ್ತಿದ್ದವು.ತನ್ನ ‘ ಆಗ್’ (1948) ಚಿತ್ರಕ್ಕೆ ಗೀತೆ ಬರೆದುಕೊಡುವಂತೆ ರಾಜ್ ಕಪೂರ್ ಶೈಲೇಂದ್ರರನ್ನು ವಿನಂತಿಸಿದರು.ಆದರೆ ಸಿನಿಮಾ ರಂಗಕ್ಕೆ ಬರಲು ಅವರು ಇಷ್ಟ ಪಡಲಿಲ್ಲ.ಆದ್ದರಿಂದ ಕಪೂರ್ ರ ಬೇಡಿಕೆಯನ್ನು ನಿರಾಕರಿಸಿದರು. ಮತ್ತೊಮ್ಮೆ ಅವರನ್ನು ತನ್ನ ಕಚೇರಿಗೆ ಕರೆಸಿಕೊಂಡು ಗೀತೆ ಬರೆದುಕೊಡುವಂತೆ ವಿನಂತಿಸಿದರು.ಆಗಲೂ ನಿರಾಕರಿಸಿದರು.”ನೋಡಿ ನೀವು ನನ್ನ  ಸಿನಿಮಾಕ್ಕೆ ಗೀತೆ ಬರೆದುಕೊಡದಿದ್ದರೂ ಪರವಾಗಿಲ್ಲ. ನಾನು‌ ನಿಮ್ಮ ಅಭಿಮಾನಿ.ಈ ಕವರಲ್ಲಿ ಹಣ ಇಟ್ಟು ಮುಚ್ಚಿ ನಿಮ್ಮ ಹೆಸರು ಬರೆದು ಇಲ್ಲೇ ಇಡುತ್ತೇನೆ.ಯಾವಾಗ ನಿಮಗೆ ಹಣದ ಅಗತ್ಯ ಇದೆ ಎಂದು ಕಂಡು ಬರುತ್ತದೋ ಆವಾಗ ಬಂದು ತೆಗೆದುಕೊಂಡು ಹೋಗಿ” ಎಂದು ರಾಜ್ ಕಪೂರ್ ಹೇಳಿ ಕವರನ್ನು ಕಚೇರಿಯಲ್ಲಿ‌ ಇಟ್ಟರು.

ಶೈಲೇಂದ್ರರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದಾಗ ಆಸ್ಪತ್ರೆಯ ಬಿಲ್ ಕಟ್ಟಲು ಹಣದ ತೊಂದರೆ ಎದುರಾಯಿತು.ಶೈಲೇಂದ್ರಗೆ ರಾಜ್ ಕಪೂರ್ ನೆನಪಾದರು.ಕೂಡಲೇ ಅವರ ಕಚೇರಿಗೆ ಓಡಿದರು.ಅಲ್ಲಿ ರಾಜ್ ಕಪೂರ್ ಇರಲಿಲ್ಲ.ಕೊಟ್ಟ ಮಾತಿನಂತೆ ಹಣದ ಲಕೋಟೆ ಅಲ್ಲಿತ್ತು.ಸಿಬ್ಬಂದಿ ಅದನ್ನು ಹಸ್ತಾಂತರಿಸಿದರು.ರಾಜ್ ಕಪೂರ್ ಗೆ ವಿಷಯ ಗೊತ್ತಾದರೂ ಫೋನ್ ಮಾಡಿ ಶೈಲೇಂದ್ರರನ್ನು ವಿಚಾರಿಸಲಿಲ್ಲ.ಮತ್ತೊಂದು ದಿನ ಶೈಲೇಂದ್ರ ಸ್ವತಃ ಫೋನ್ ಮಾಡಿ ಧನ್ಯವಾದ ಸಲ್ಲಿಸಿ ಸಿನಿಮಾಗಳಿಗೆ ಗೀತೆ ಬರೆಯುವುದಾಗಿ ಹೇಳಿದರು.ಆವಾಗ ‘ ಬರ್ಸಾತ್ ‘ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.ಅದಕ್ಕೆ ಎರಡು‌ ಗೀತೆಗಳನ್ನು ಬರೆಯಲು ಬಾಕಿ ಇತ್ತು. ” ಪತ್ ಲೀ ಕಮರ್ ಹೈ…” ಮತ್ತು ” ಬರ್ ಸಾತ್ ಮೆ….” ಗೀತೆಗಳನ್ನು 500 ರೂಪಾಯಿಗೆ ಶೈಲೇಂದ್ರ ಬರೆದುಕೊಟ್ಟರು.ಶಂಕರ್ ಜೈಕಿಶನ್ ರಾಗ ಸಂಯೋಜಿಸಿದ್ದರು.

ಏಳಿಂಜೆ ನಾಗೇಶ್ (98929 80750)



































































































error: Content is protected !!
Scroll to Top