ಕಾರ್ಕಳದವರೇ ಆದ ಸುಧೀರ್ ಶಾನ್‌ಭೋಗ್ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಿನೇಮಾ ಕ್ಷೇತ್ರದಲ್ಲಿ ನಿರ್ದೇಶಕನಾಗಿ, ಕತೆಗಾರನಾಗಿ, ಕ್ರಿಯೇಟಿವ್ ಹೆಡ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ಮತ್ತು ವಿನಯ್ ರಾಜ್‌ಕುಮಾರ್ ಅಭಿನಯದ ಅನಂತು v/s ನುಸ್ರತ್ ತುಂಬ ಸುದ್ದಿ ಮಾಡಿತ್ತು. ಅದೇ ರೀತಿ ಅವರು ಕತೆ ಬರೆದಿರುವ ಅಳಿದುಳಿದವರು, ನಿರ್ಮಾಣ ವಿನ್ಯಾಸ ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಸಿನೇಮಾ ಮದಿಪು, ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ, ತುಳು ಸಿನೇಮಾ ಗೋಲ್‌ಮಾಲ್ ಅವರಿಗೆ ಬಹಳ ಜನಪ್ರಿಯತೆ ತಂದುಕೊಟ್ಟಿತು. ಝೀ ಕನ್ನಡದ ರಾಧಾ ಕಲ್ಯಾಣ ಮತ್ತು ಬದುಕು ಜಟಕಾ ಬಂಡಿ ಜನಪ್ರಿಯ ಧಾರಾವಾಹಿಗಳಲ್ಲಿ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅವರು newskarkala.com ನೊಂದಿಗೆ ಮಾಡಿದ ಮಾತುಕತೆಯ ಸಾರಾಂಶ ಇಲ್ಲಿದೆ.
ಆರಂಭದ ಹೆಜ್ಜೆಗಳು
ಕಾರ್ಕಳದಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉದ್ಯಮವನ್ನು ಮಾಡಿಕೊಂಡಿದ್ದ ನನಗೆ ಬಾಲ್ಯದಿಂದಲೂ ಕತೆ, ಚಿತ್ರಕತೆ ಮತ್ತು ಸಿನೇಮಾಗಳಲ್ಲಿ ತುಂಬ ಆಸಕ್ತಿಯಿತ್ತು. ನನ್ನ ತಂದೆ ಸುಧಾಕರ ಶಾನ್ ಭೋಗ್, ತಾಯಿ ವೀಣಾ ಶಾನ್‌ಭೋಗ್, ಪತ್ನಿ ಶಮಾ ಶಾನುಭೋಗ್ ನನ್ನ ಆಸಕ್ತಿಯನ್ನು ಮನಗಂಡು ಪ್ರೋತ್ಸಾಹಿಸಿದವರು.

ಬೆಂಗಳೂರಿನಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 2006ರಲ್ಲಿ ನಡೆಸಿದ ನಾಲ್ಕು ದಿನಗಳ ಸಿನೇಮಾ ನಿರ್ಮಾಣ ಕಾರ್ಯಾಗಾರ ನನ್ನ ಜೀವನದ ದಿಕ್ಕನ್ನು ಬದಲಾಯಿಸಿತು. ಯೋಗರಾಜ್ ಭಟ್, ಸೂರಿ, ಬಿ. ಸುರೇಶ್, ಜಿ.ಎಸ್. ಭಾಸ್ಕರ್, ವೇಣು ಮೊದಲಾದವರು ಆ ಶಿಬಿರದಲ್ಲಿ ಮಾರ್ಗದರ್ಶನ ಮಾಡಿದ್ದರು. ಅದೇ ಹೊತ್ತಿಗೆ ಖ್ಯಾತ ಧಾರಾವಾಹಿ ನಿರ್ದೇಶಕ ವಿನು ಬಳಂಜ ಅವರ ಜನಪ್ರಿಯ ಧಾರಾವಾಹಿ ಬಂದೆ ಬರುತಾವ ಕಾಲಕ್ಕೆ ಕೆಲಸ ಮಾಡುವ ಅವಕಾಶ ದೊರೆಯಿತು.
ಕನ್ನಡ ಸಿನಿ ಜಗತ್ತಿಗೆ ಎಂಟ್ರಿ ಹೇಗಾಯ್ತು ?
ನನ್ನ ಸ್ನೇಹಿತ ಅಶು ಬೆದ್ರ ನಿರ್ಮಾಣ ಮಾಡಿದ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರಿಂದ ಸಿನೇಮಾ ದಿಗ್ಗಜರ ಪರಿಚಯವಾಯಿತು. ಅಶು ಬೆದ್ರ ಅವರ ನಿರ್ಮಾಣದ ಅಳಿದುಳಿದವರು ಸಿನೇಮಾಕ್ಕೆ ಮೂಲಕತೆಯನ್ನು ನೀಡಿದ್ದೆ. ನಂತರ ಖ್ಯಾತ ನಿರ್ದೇಶಕ ಸುನಿ ಅವರ ನಿರ್ದೇಶನದ ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ ಸಿನೇಮಾದ ನಿರ್ಮಾಣ ವಿನ್ಯಾಸ ಮಾಡಿದೆ. ಅದೇ ಹೊತ್ತಿಗೆ ನಾನು ನಿರ್ಮಾಣ ವಿನ್ಯಾಸ ಮತ್ತು ಕಥಾ ವಿಸ್ತರಣೆ ಮಾಡಿದ ಮದಿಪು ಸಿನೇಮಾಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಬಂದವು.

ಸಿನೇಮಾ ಇಂಡಸ್ಟ್ರಿಯ ಇತ್ತೀಚೆಗಿನ ಬೆಳವಣಿಗೆ ಕುರಿತು
ಕನ್ನಡ ಸಿನೇಮಾ ಇಂಡಸ್ಟ್ರಿ ಇಂದು ವರ್ಷಕ್ಕೆ 300-350 ಕೋಟಿ ಬಂಡವಾಳವನ್ನು ಹೊಂದಿ ಬೃಹತ್ತಾಗಿ ಬೆಳೆದು ನಿಂತಿದೆ. 10 ರಿಂದ 15 ಸಾವಿರ ಸಿನೇಮಾ ಕಾರ್ಮಿಕರು ಮತ್ತು ಕಲಾವಿದರು ಈ ಇಂಡಸ್ಟ್ರಿಯನ್ನೇ ನಂಬಿಕೊಂಡಿದ್ದಾರೆ. ಒಂದು ಸಿನೇಮಾ ನಿರ್ಮಾಣದಲ್ಲಿ 120 ರಿಂದ 15೦ ಜನ ಪ್ರತ್ಯಕ್ಷವಾಗಿ ಮತ್ತು 50,000 ಪರೋಕ್ಷವಾಗಿ ದುಡಿಯುತ್ತಾರೆ.
ಕೊರೊನಾ ಪರಿಣಾಮದಿಂದ ಶೇ. 90 ಮಂದಿ ಸಿನೇಮಾ ಇಂಡಸ್ಟ್ರಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಚಿತ್ರೀಕರಣ ಪೂರ್ತಿಯಾಗಿ ಹತ್ತಾರು ಸಿನೇಮಾಗಳು ಬಿಡುಗಡೆಗಾಗಿ ಕಾಯುತ್ತಿವೆ. ಥಿಯೇಟರ್‌ಗಳು ಮುಚ್ಚಿರುವ ಕಾರಣ ಎಲ್ಲರಿಗೂ ಸಮಸ್ಯೆಯಾಗಿದೆ. ಅದರಲ್ಲೂ ದಿನ ಭತ್ಯೆಯಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ಮಲಗುವಂತಾಗಿದೆ.
ಕನ್ನಡ ಸಿನಿ ಪ್ರೇಕ್ಷಕರು
ಕನ್ನಡದ ಸಿನೇಮಾ ಪ್ರೇಕ್ಷಕರು ಈಗ ಹಿಂದಿ, ತೆಲುಗು, ಮಲಯಾಳಂ ಸಿನೇಮಾಗಳನ್ನು ನೋಡಿ ತುಂಬ ಅಪ್‌ಡೇಟ್ ಆಗಿದ್ದಾರೆ. ಅವರ ಅಭಿರುಚಿ ಬದಲಾಗಿವೆ. ಕತೆ ಮತ್ತು ಚಿತ್ರಕತೆಗಳು ಅದಕ್ಕೆ ಸರಿಯಾಗಿ ಅಪ್‌ಡೇಟ್ ಆಗಬೇಕಾಗಿದೆ. ಒಬ್ಬ ಮಾಸ್ ಹೀರೊ ಪ್ರೇಕ್ಷಕರನ್ನು ಒಂದು ಹಂತಕ್ಕೆ ಸಿನೇಮಾ ಮಂದಿರಗಳಿಗೆ ಎಳೆದು ತರಬಹುದು. ಆದರೆ ಆ ಸಿನೇಮಾವನ್ನು ಗೆಲ್ಲಿಸುವ ಶಕ್ತಿ ಕತೆ ಮತ್ತು ಚಿತ್ರಕತೆಗಳಿಗಿವೆ. ಕನ್ನಡದ ಪ್ರತಿಯೊಂದು ಸಿನೇಮಾವನ್ನು ಪ್ರೇಕ್ಷಕರು ತಮಿಳು, ತೆಲುಗಿನೊಂದಿಗೆ ಹೋಲಿಸುತ್ತಿರುವ ಕಾರಣ ನಾವು ಅಪ್‌ಡೇಟ್ ಆಗುವುದು ಅತಿ ಅಗತ್ಯ.
ಕೊರೊನೋತ್ತರ ಸಿನೇಮಾ ಇಂಡಸ್ಟ್ರಿ
ದೊಡ್ಡ ದೊಡ್ಡ ಹೀರೊಗಳ ಅನೇಕ ಸಿನೇಮಾಗಳು ತೆರೆಗೆ ಬರಲು ಕಾಯುತ್ತಿವೆ. ದರ್ಶನ್ ಅಭಿನಯದ ರಾಬರ್ಟ್, ಪುನೀತ್ ಅಭಿನಯದ ರಾಜರತ್ನ, ಯಶ್ ಅಭಿನಯದ ಕೆಜಿಎಫ್ 2 ಸಿನೇಮಾಗಳು ಬೆಳ್ಳಿತೆರೆಗೆ ಬಂದರೆ ಜನರು ಸಿನೇಮಾ ಮಂದಿರಕ್ಕೆ ಮೊದಲಿನ ಉತ್ಸಾಹದಲ್ಲಿಯೇ ಬರುತ್ತಾರೆ. ಮಲ್ಟಿಫ್ಲೆಕ್ಸ್‌ಗಳು ಸದ್ಯದಲ್ಲಿ ತೆರೆಯುವ ಸಾಧ್ಯತೆಯಿಲ್ಲ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಬಹುದು. ಆಗ ಕನ್ನಡ ಸಿನೇಮಾ ಇಂಡಸ್ಟ್ರಿ ಚೇತರಿಸಿಕೊಳ್ಳುವುದು ಖಂಡಿತ.
ಸರಕಾರ ಇಂಡಸ್ಟ್ರೀ ಅಭಿವೃದ್ಧಿಗಾಗಿ ಏನು ಮಾಡಬಹುದು ?
ಇಂದು ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಒಳ್ಳೆಯ ಸಿನೇಮಾ ಮಂದಿರಗಳಿಲ್ಲ. ಆದರೆ, ಸಿನೇಮಾ ನೋಡುವ ಪ್ರೇಕ್ಷಕರಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಸರಕಾರವು ಖಾಸಗಿ ಸಹಭಾಗಿತ್ವದಲ್ಲಿ ಸಣ್ಣ ಗಾತ್ರದ ಥಿಯೇಟರ್ ಗಳನ್ನು ತೆರೆಯಬೇಕು. ಒಳ್ಳೆಯ ಸಿನೇಮಾಗಳಿಗೆ ಹೆಚ್ಚು ಸಬ್ಸಿಡಿ ಕೊಡಬೇಕು ಮತ್ತು ಸಿನೇಮಾ ಬಿಡುಗಡೆಯಾದ ಆ ಸಬ್ಸಿಡಿ ಮೊತ್ತ ದೊರೆಯುವಂತಾಗಬೇಕು.

ಒಟಿಟಿ ಫ್ಲಾಟ್ ಫಾರ್ಮ್ ಬಗ್ಗೆ…
ಇದೊಂದು ತಾತ್ಕಾಲಿಕ ವ್ಯವಸ್ಥೆ. ನಿರ್ಮಾಪಕರು ತಮ್ಮ ಹಳೆಯ ಮತ್ತು ಹೊಸ ಸಿನೇಮಾಗಳ ಮೂಲಕ ಒಂದಿಷ್ಟು ಪ್ರೇಕ್ಷಕರನ್ನು ತಲುಪಲು ಸಾಧ್ಯವಿದೆಯಾದರೂ ಥಿಯೇಟರ್‌ನಲ್ಲಿ ಕುಳಿತು ನೋಡುವ ಅನುಭವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಮುಂದಿನ ಪ್ರೊಜೆಕ್ಟ್
ಲಾಕ್‌ಡೌನ್ ಸಮಯದಲ್ಲಿ ತುಂಬ ಓದಿ ಬರೆಯಲು ಸಮಯ ಸಿಕ್ಕಿದ ಕಾರಣ ವಿಕಿಪಿಡಿಯಾಕ್ಕೆ ಒಂದಿಷ್ಟು ಲೇಖನಗಳನ್ನು ಬರೆದಿದ್ದೇನೆ. ಕಾರ್ಕಳದವರೇ ಆದ ಗೌತಮ್ ಜ್ಯೋತ್ಸ್ನಾ ಅವರು ಬರೆದ ಮಾರೀಚ ಎಂಬ ಕತೆಯನ್ನು ಚಿತ್ರಕತೆ ಮತ್ತು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದೇವೆ. ಅದೇ ರೀತಿಯಾಗಿ ವಿನಯ್ ರಾಜ್ ಕುಮಾರ್ ಅವರಿಗೆ ಇನ್ನೊಂದು ಸಿನೇಮಾವನ್ನು ನಿರ್ದೇಶನ ಮಾಡುವ ಬಗ್ಗೆ ಮಾತುಕತೆ ನಡೆದಿವೆ.
ಕಾರ್ಕಳದ ಜನರ ಬಗ್ಗೆ…
ನಾನು ಬಾಲ್ಯದಿಂದಲೂ ಕಂಡಿರುವ ಕಾರ್ಕಳದ ಜನ ಒಳ್ಳೆಯ ಕೆಲಸಕ್ಕೆ ಯಾವಾಗಲೂ ಬೆಂಬಲ ಕೊಡುತ್ತಾರೆ. ಇಲ್ಲಿ ಸುನಾದ್ ಗೌತಮ್ ಅವರಂಥ ಸಂಗೀತ ನಿರ್ದೇಶಕರು, ನಿನಾದ ಅವರಂಥ ಗಾಯಕಿ, ಮಂಜುನಾಥ್ ಕಾಮತ್ ಅವರಂಥ ಕತೆಗಾರರಿದ್ದಾರೆ. ದೇವರು ನಡೆಸಿಕೊಟ್ಟರೆ ಕಾರ್ಕಳದ್ದೇ ಪ್ರತಿಭೆಗಳನ್ನು ಬಳಸಿಕೊಂಡು ಒಂದು ಉತ್ತಮ ಕನ್ನಡ ಸಿನೇಮಾ ಮಾಡುವ ಕನಸು ಕೂಡ ನನ್ನಲ್ಲಿದೆ. ಒಂದು ಪೂರ್ತಿ ಸಿನಿಮಾವನ್ನು ಕಾರ್ಕಳದಲ್ಲೇ ಶೂಟಿಂಗ್ ಮಾಡುವಂತಹ ವಾತಾವರಣ, ಸುಂದರ ತಾಣ ಇಲ್ಲಿವೆ. ನನ್ನ ಸಿನೇಮಾ ಯಾತ್ರೆಗೆ ಬೆಂಬಲ ಕೊಡುತ್ತಿರುವ ನನ್ನೆಲ್ಲ ಸ್ನೇಹಿತರಿಗೆ ನಾನು newskarkala.com ಮೂಲಕ ಧನ್ಯವಾದ ಸಲ್ಲಿಸುತ್ತೇನೆ.






































































