ದಿಲ್ಲಿ, ಆ.23: ಕಾಂಗ್ರೆಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪದತ್ಯಾಗ ಮಾಡುತ್ತಾರೆಯೇ? ಕಾಂಗ್ರೆಸಿನಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪವಾಗಬೇಕೆಂದು ಆಗ್ರಹಿಸಿ ಪಕ್ಷದ ಕೆಲವು ಹಿರಿಯ ನಾಯಕರು ಬರೆದ ಪತ್ರ ಬಹಿರಂಗವಾದ ಬಳಿಕ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಒಂದು ವರ್ಷ ಪೂರ್ತಿಗೊಳಿಸಿದ್ದೇನೆ ಹಾಗೂ ಈಗ ಪದತ್ಯಾಗ ಮಾಡಲು ಬಯಸಿದ್ದೇನೆ. ಪಕ್ಷವೇ ಹೊಸ ಅಧ್ಯಕ್ಷರನ್ನು ಆರಿಸಲಿ ಎಂದಿದ್ದಾರೆ.
ಸೋಮವಾರ ಪಕ್ಷದ ಕಾರ್ಯಕಾರಿ ಬೈಠಕ್ ನಡೆಯಲಿದ್ದು, ಇದರಲ್ಲಿಯೇ ಸೋನಿಯಾ ಗಾಂಧಿ ಪದತ್ಯಾಗದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಆದರೆ ಹೊಸ ಅಧ್ಯಕ್ಷರು ಯಾರು ಆಗುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವರ್ಗದ ನಾಯಕರು ರಾಹುಲ್ ಗಾಂಧಿಯೇ ಮರಳಿ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹಿರಿಯರ ಪತ್ರವೇ ಕಾಂಗ್ರೆಸ್ ತುರ್ತಾಗಿ ಕಾರ್ಯಕಾರಿ ಸಭೆ ನಡೆಸಲು ಕಾರಣ. ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಲು ಕಾರ್ಯಕಾರಿ ಸಭೆ ಕರೆಯಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.






































































