ಉಡುಪಿ : ಅಯೋಧ್ಯೆಯ ರಾಮಮಂದಿರದ ಕಳವು ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಸರಕಾರವು ರಾಮ ಮಂದಿರದ ಟ್ರಸ್ಟ್‌ನ ಕೋರಿಕೆಯಂತೆ ವಿಶೇಷ ತನಿಖಾ ತಂಡದ (ಎಸ್.ಐ.ಟಿ) ಮೂಲಕ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಂಡರೇ ಹೊರತು ಸಾಂಸ್ಥಿಕವಾಗಿ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಿಲ್ಲ ಎಂದು ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ತಿಳಿಸಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟಕ್ಕೆ ಅಡ್ಡಿಯಾಗಲು ನಡೆದ ಪ್ರಯತ್ನಗಳು, ಕರಸೇವಕರ ವಿರುದ್ಧ ಕೈಗೊಂಡ ಕ್ರಮಗಳು ಹಾಗೂ ರಾಮಮಂದಿರ ಚಳವಳಿಯನ್ನು ಹತ್ತಿಕ್ಕಲು ನಡೆದ ಘಟನೆಗಳು ನಡೆದಾಗ ಕಾಂಗ್ರೆಸ್ ಪಕ್ಷದ ನಿಲುವು ಏನಾಗಿತ್ತು ಎಂಬುದು ಕಾಪುವಿನ ಕಾಂಗ್ರೆಸ್ಸಿಗರಿಗೆ ಮರೆತುಹೋಗಿದೆಯೇ ಎಂದು ಪ್ರಶ್ನಿಸಿರುವ ಅವರು ಅಯೋಧ್ಯೆಯ ರಾಮ ಮಂದಿರ ಕಾಣಿಕೆ ಕಳವು ಪ್ರಕರಣವು ರಾಮಮಂದಿರ ವಿರೋಧಿಗಳನ್ನು ಶ್ರೀರಾಮಭಕ್ತರನ್ನಾಗಿಸಿದೆ ಎಂದಿದ್ದಾರೆ.
ಶ್ರೀರಾಮ ಮಂದಿರವು ಕೋಟ್ಯಾಂತರ ಹಿಂದೂಗಳ ಭಕ್ತಿ, ನಂಬಿಕೆ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಇಂತಹ ಭಾವನಾತ್ಮಕ ವಿಷಯಗಳನ್ನು ನಿಮ್ಮ ಪ್ರತಿಭಟನೆಗಾಗಿ ಬಳಸುವುದಕ್ಕಿಂತ, ನಿಮ್ಮ ಕಾಂಗ್ರೆಸ್ ಪಕ್ಷದ ಹಿಂದಿನ ನಿಲುವು ಮತ್ತು ನಡೆ-ನುಡಿಗಳ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ ಎಂದು ಶರಣ್ ಕುಮಾರ್ ಮಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















