ಸದಸ್ಯರ ಸಂಖ್ಯೆ 543ರಿಂದ 816ಕ್ಕೆ ಏರಿಕೆ – ಕರ್ನಾಟಕದಲ್ಲಿ 28ರಿಂದ 42 ಸ್ಥಾನ ?
ದೆಹಲಿ : ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಗುರುವಾರ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘಾವಲ್ ಮತ್ತು ಅಮಿತ್ ಶಾ ಅವರು ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಕಾಯ್ದೆ, ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಸೇರಿದಂತೆ ಮಹತ್ವದ ಮೂರು ಮಸೂದೆಗಳನ್ನು ಮಂಡಿಸಿದರು.
ಹೊಸ ಮಸೂದೆಯಂತೆ 543 ಲೋಕಸಭಾ ಸ್ಥಾನ ಹೆಚ್ಚಳದ ಬಳಿಕ 816ಕ್ಕೇರಲಿದೆ. ಕರ್ನಾಟಕದಲ್ಲಿ 28 ಇರುವ ಲೋಕಸಭಾ ಕ್ಷೇತ್ರಗಳು 42 ಕ್ಕೇರುವ ಸಾಧ್ಯತೆಗಳಿವೆ. ಇದೇ ವೇಳೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿಯೂ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಕಲ್ಪಿಸಲು ಸ್ಥಾನಗಳನ್ನು ಹೆಚ್ಚಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ವಿವಿಧ ಕ್ಷೇತ್ರಗಳಿಗೆ ರೋಟೇಶನ್ ಆಧಾರದ ಮೇಲೆ ಹಂಚಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಮುಂದಿನ ಲೋಕಸಭಾ ಚುನಾವಣೆ 2029ರಲ್ಲಿ ನಡೆಯಲಿದ್ದು, ಈ ಹೊತ್ತಲ್ಲಿ ಕೇಂದ್ರ ಸರಕಾರ ಐತಿಹಾಸಿಕ ನಿರ್ಧಾರಕ್ಕೆ ಕೈಹಾಕಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆ ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆ ಆಗಿದ್ದರೂ ಜಾರಿಯಾಗಿರಲಿಲ್ಲ. ಈಗ ಅದು ಕೂಡ ಜಾರಿಯಾಗುವ ಕಾಲ ಸನ್ನಿಹಿತವಾಗಿದೆ.

ಜನಸಂಖ್ಯೆಯ ಆಧಾರ, ಅನುಪಾತವನ್ನು ಕಾಯ್ದುಕೊಂಡು, ಒಟ್ಟು ಸೀಟುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಮಸೂದೆ ಪರ ಲೋಕಸಭೆಯಲ್ಲಿ 207 ಮತ ಚಲಾವಣೆಯಾಗಿದ್ದರೆ, ಮಸೂದೆ ವಿರುದ್ಧ 126 ಮತ ಚಲಾವಣೆಯಾಗಿದೆ. ಮೂರು ವಿಧೇಯಕ ಮಂಡನೆಗೆ ಒಪ್ಪಿಗೆ ದೊರೆತಿದ್ದು ಈ ಕುರಿತು ಸಂಸತ್ತಿನಲ್ಲಿ ಎರಡು ದಿನಗಳ ಕಾಲ ಚರ್ಚೆ ನಡೆಯಲಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಗುವುದಾದರೆ ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
































