ತಾ. ಪಂ. ಮಾಜಿ ಅಧ್ಯಕ್ಷ ಸುಂದರ್ – ಸಂಜೀವ ಮಾಳ ತಿರುಗೇಟು
ಕಾರ್ಕಳ : ಅಣ್ಣಪ್ಪ ನಕ್ರೆ ಮತ್ತು ವಕೀಲ ರಾಘವ ಕುಕ್ಕುಜೆ ಅವರು ಕಾಂಗ್ರೆಸ್ ಪ್ರೇರಣೆಯಿಂದಲೇ ಸಮಾಜದಲ್ಲಿ ವಿಷ ಬಿತ್ತಲು ಹೊರಟಿರುವುದು ಸರಿಯಲ್ಲ ಎಂದು ದಲಿತ ಮುಖಂಡರಾದ ತಾ. ಪಂ. ಮಾಜಿ ಅಧ್ಯಕ್ಷ ಸುಂದರ್ ಬಿ. ಹಾಗೂ ಸಂಜೀವ ಮಾಳ ಜಂಟಿ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಣ್ಣಪ್ಪ ನಕ್ರೆ ಮತ್ತು ರಾಘವ ಕುಕ್ಕುಜೆ ಅವರ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಅವರು ಕಾರ್ಕಳಕ್ಕೆ ಭವನದ ಕೊಡುಗೆ ನೀಡಿರುವವರು ಶಾಸಕ ಸುನಿಲ್ ಕುಮಾರ್.
ಸುನಿಲ್ ಕುಮಾರ್ ಇಚ್ಚಾಶಕ್ತಿಯಿಂದಾಗಿ ತಾಲೂಕು ಮಟ್ಟದಲ್ಲಿ ಎಲ್ಲೂ ಇಲ್ಲದ ಇಷ್ಟು ಭವ್ಯವಾದ ಅಂಬೇಡ್ಕರ್ ಭವನ ಕಾರ್ಕಳದಲ್ಲಿ ನಿರ್ಮಾಣವಾಗಿದೆ. ಅಭಿವೃದ್ಧಿಯ ಸಾಕ್ಷಿಯಾಗಿ ನಿಂತಿರುವ ಆ ಭವನವನ್ನು ನೋಡಿಯೂ ಸುಳ್ಳು ಹೇಳುತ್ತಿರುವ ‘ಮೊಸರಲ್ಲಿ ಕಲ್ಲು ಹುಡುಕುವ’ ನಿಮ್ಮ ಬುದ್ಧಿಯನ್ನು ನಮ್ಮ ಸಮಾಜ ಗಮನಿಸುತ್ತಿದೆ. ಸಮುದಾಯಕ್ಕೆ ಮೀಸಲಿಟ್ಟ ಕೋಟ್ಯಾಂತರ ರೂಪಾಯಿ ಹಣವನ್ನು ಕಾಂಗ್ರೆಸ್ ಸರಕಾರ ದುರ್ಬಳಕೆ ಮಾಡಿದಾಗ ಯಾಕೆ ನೀವು ಧ್ವನಿ ಎತ್ತಲಿಲ್ಲ ? ಎಂದು ಸುಂದರ್ ಹಾಗೂ ಸಂಜೀವ ಅವರು ಪ್ರಶ್ನಿಸಿದ್ದಾರೆ.
ಅವಮಾನವಲ್ಲವೇ ?
ಭವ್ಯವಾದ ಅಂಬೇಡ್ಕರ್ ಭವನವನ್ನು ಕಡೆಗಣಿಸಿ ಯಾವುದೇ ಸಭಾ ಕಾರ್ಯಕ್ರಮ ನಡೆಸದೇ ಉದ್ಘಾಟನೆ ಮಾಡಿರುವುದು ಕಾಂಗ್ರೆಸ್ ಸರ್ಕಾರ ಸಮಾಜಕ್ಕೆ ಮಾಡಿದ ಅವಮಾನವಲ್ಲವೆ ? ಕಾಮಗಾರಿ ಸಂಪೂರ್ಣವಾಗದೇ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಭವನವನ್ನು ಉಧ್ಘಾಟನೆ ಮಾಡಿರುವುದು ಯಾವ ಉದ್ದೇಶಕ್ಕೆ ಎಂದು ಈವರೆಗೆ ಯಾಕೆ ಕೇಳಲಿಲ್ಲ ? ಎಂದು ಸುಂದರ್ ಹಾಗೂ ಸಂಜೀವ ಅವರು ಸರಣಿ ಪ್ರಶ್ನೆಯೆತ್ತಿದ್ದಾರೆ.
ಉಸ್ತುವಾರಿ ಸಚಿವರೆಲ್ಲಿ ?
ಕಳೆದ ಎರಡು ವರ್ಷಗಳಿಂದ ಅಂಬೇಡ್ಕರ್ ಭವನದ ಕನಿಷ್ಠ ಮೂಲಭೂತ ಸೌಕರ್ಯದ ಅನುದಾನಕ್ಕಾಗಿ ಮಾನ್ಯ ಶಾಸಕರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ನಿಮ್ಮ ನಿಲುವೇನು ? ಅನುದಾನಕ್ಕಾಗಿ ನಿಮ್ಮ ಪ್ರಯತ್ನವೇನು ? ಕ್ಷೇತ್ರದ ಸತ್ಯಸಾರಮಣಿ ಮುಗ್ಗೇರ್ಕಳ ದೈವಸ್ಥಾನಗಳ ಜಾಗದ ರೆಕಾರ್ಡ್ಗಳನ್ನು ಸರಿ ಮಾಡಲು ಶಾಸಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದರ ಕುರಿತು ನಿಮ್ಮ ಧ್ವನಿ ಯಾಕೆ ಹೊರ ಬರಲಿಲ್ಲ ? ಅದೆಲ್ಲ ಬಿಡೋಣ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ ಭಾಗವಹಿಸಿದ್ದಾರೆ ಎಂಬುವುದನ್ನು ಯಾಕೆ ಕೇಳಲಿಲ್ಲ ? ಎಂದು ಪ್ರಕಟಣೆಯಲ್ಲಿ ಕೇಳಿದ್ದಾರೆ.
ಶ್ರೇಯೋಭಿವೃದ್ಧಿಗೆ ಶ್ರಮಿಸಿ
ಈ ಎಲ್ಲಾ ವಿಚಾರಗಳನ್ನು ಕಂಡು ಕಾಣದಂತೆ ವರ್ತಿಸುವ ನೀವು ಈಗ ರಾಜಕೀಯ ಪ್ರೇರಣೆಯಿಂದ ಹೇಳಿಕೆ ನೀಡುತ್ತಿದ್ದೀರಿ. ಇದರ ಬದಲು ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಂಬೇಡ್ಕರ್ ಭಕ್ತಿ ಬಿಜೆಪಿಯ ರಕ್ತದಲ್ಲಿದೆ
ಬಿಜೆಪಿ ಕೇವಲ ಭಾಷಣದ ಪಕ್ಷವಲ್ಲ. ಪ್ರತಿ ಕಾಲೋನಿಗಳಲ್ಲೂ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ಬಾಬಾಸಾಹೇಬರ ತತ್ತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವುದು ಬಿಜೆಪಿ ಕಾರ್ಯಕರ್ತರು. ಬಿಜೆಪಿಯ ತಳಮಟ್ಟದ ಕಾರ್ಯಕರ್ತನ ಎದೆಯಲ್ಲೂ ಅಂಬೇಡ್ಕರ್ ಬಗ್ಗೆ ಅಪಾರ ಭಕ್ತಿಯಿದೆ. ನಮಗೆ ನಿಮ್ಮಂತಹವರಿಂದ ಪಾಠ ಕಲಿಯುವ ಅಗತ್ಯವಿಲ್ಲ.
ಕಾಂಗ್ರೆಸ್ ಕೈಗೊಂಬೆ
ಸಮಾಜದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಬೇಡಿ. ಕಾಂಗ್ರೆಸ್ಸಿನ ಕೈಗೊಂಬೆಗಳಂತೆ ವರ್ತಿಸುತ್ತಿರುವ ಅಣ್ಣಪ್ಪ ನಕ್ರೆ ಮತ್ತು ರಾಘವ ಕುಕ್ಕುಜೆ ಸಮಾಜದ ಹಿತಕ್ಕಿಂತ ರಾಜಕೀಯ ಲಾಭವನ್ನೇ ದೊಡ್ಡದಾಗಿ ಕಂಡಿದ್ದಾರೆ. ಮಾಡಿದ ಒಳ್ಳೆಯ ಕೆಲಸವನ್ನು ಮುಕ್ತವಾಗಿ ಶ್ಲಾಘಿಸುವುದು ಧರ್ಮ. ಅದು ಬಿಟ್ಟು ಸುಳ್ಳು ಆರೋಪ ಮಾಡಿ ಗೊಂದಲ ಮೂಡಿಸಲು ಪ್ರಯತ್ನಿಸಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಅಭಿವೃದ್ಧಿ ಪಥಕ್ಕೆ ಅಡ್ಡಗಾಲು ಹಾಕುವ ನಿಮ್ಮ ಈ ನಾಟಕಗಳು ಸತ್ಯದ ಮುಂದೆ ಹೆಚ್ಚು ಕಾಲ ನಡೆಯುವುದಿಲ್ಲ. ಸುನಿಲ್ ಕುಮಾರ್ ಅವರ ಶ್ರಮವನ್ನು ಕಡೆಗಣಿಸಿ ಸಮಾಜದ ಹಾದಿ ತಪ್ಪಿಸುವ ಇಂತಹ ಕೃತ್ಯಗಳನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಡಿ ಎಂದು ಸುಂದರ್ ಹಾಗೂ ಸಂಜೀವ ಅವರು ಎಚ್ಚರಿಕೆ ನೀಡಿದ್ದಾರೆ.































