ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಬಂದರು ಹಾಗೂ ಕರಾವಳಿ ಪ್ರದೇಶಗಳ ಸುತ್ತ ಭೀಕರ ನೌಕಾ ದಿಗ್ಬಂಧನ ವಿಧಿಸಿದ್ದಾರೆ. ಈ ಬೆಳವಣಿಗೆಯಿಂದ ಅರಬ್ಬಿ ಸಮುದ್ರವು ಯುದ್ಧಕಾಲದ ಸನ್ನಿವೇಶ ಎದುರಿಸುತ್ತಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಇಂದಿನಿಂದಲೇ ಈ ದಿಗ್ಬಂಧನ ಜಾರಿಗೆ ಬಂದಿದೆ. ಅರಬ್ಬಿ ಸಮುದ್ರದಲ್ಲಿ 15ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದ್ದು, ಈ ಕಾರ್ಯಾಚರಣೆಯ ನೇತೃತ್ವವನ್ನು ಬೃಹತ್ ಯುದ್ಧನೌಕೆ ‘ಯುಎಸ್‌ಎಸ್ ಟ್ರಿಪೋಲಿ’ ವಹಿಸಿದೆ.
ವಿಶೇಷವೆಂದರೆ, ಈ ನೌಕೆಯು ಶತ್ರುಗಳ ಕಣ್ಣಿಗೆ ಬೀಳದಂತೆ ದಾಳಿ ನಡೆಸುವ ಸಾಮರ್ಥ್ಯವುಳ್ಳ ಎಫ್-35ಬಿ ಲೈಟ್ನಿಂಗ್-2 ಸ್ಟೆಲ್ತ್ ಫೈಟರ್‌ಗಳು ಮತ್ತು ಎಂವಿ-22 ಆಸ್ಪ್ರೇ ವಿಮಾನಗಳನ್ನು ಹೊತ್ತೊಯ್ಯುತ್ತಿದೆ. ಸುಮಾರು 20ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧ ವಿಮಾನಗಳು ಇರಾನ್ ಮೇಲೆ ಹಗಲು-ರಾತ್ರಿ ನಿಗಾ ಇರಿಸಿವೆ.
ಸನಿಹ ಬಂದರೆ ಸರ್ವನಾಶ : ಟ್ರಂಪ್ ಎಚ್ಚರಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ಗುಡುಗಿರುವ ಅಮೆರೆಕಾ ಅಧ್ಯಕ್ಷ ಟ್ರಂಪ್, ಇರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ನೌಕಾಪಡೆಯ ಬಹುತೇಕ ಭಾಗ ಈಗಾಗಲೇ ಸಮುದ್ರಪಾಲಾಗಿದೆ. ಸುಮಾರು 158 ಹಡಗುಗಳನ್ನು ನಾಶಪಡಿಸಲಾಗಿದೆ. ಇರಾನ್‌ನ ಸಣ್ಣ ವೇಗದ ದಾಳಿ ಹಡಗುಗಳು ನಮ್ಮ ದಿಗ್ಬಂಧನದ ಹತ್ತಿರ ಸುಳಿದರೆ, ಅವುಗಳನ್ನು ಕ್ಷಣಾರ್ಧದಲ್ಲಿ ಧ್ವಂಸಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸಂಧಾನ ವಿಫಲ – ದಿಗ್ಬಂಧನ ಅನಿವಾರ್ಯ ?
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯ ಅನಂತರ ಆರಂಭವಾದ ಯುದ್ಧವನ್ನು ಕೊನೆಗೊಳಿಸಲು ಹಲವು ಸಂಧಾನ ಪ್ರಯತ್ನಗಳು ನಡೆದಿದ್ದವು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರೂ, ಅದು ಯಶಸ್ವಿಯಾಗಿಲ್ಲ. ಈ ಸಂಧಾನದ ವಿಫಲತೆಯ ಬೆನ್ನಲ್ಲೇ ಅಮೆರಿಕ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಇರಾನ್‌ನಿಂದ ಹೊರಹೋಗುವ ಅಥವಾ ಅಲ್ಲಿಗೆ ಬರುವ ಯಾವುದೇ ಹಡಗುಗಳನ್ನು ಅಮೆರಿಕದ ನೌಕಾಪಡೆ ತಪಾಸಣೆ ನಡೆಸಲಿದೆ. ಇರಾನ್ ಬಂದರುಗಳನ್ನು ಹೊರತುಪಡಿಸಿ, ಇತರ ದೇಶಗಳ ಬಂದರುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ
ಈ ದಿಗ್ಬಂಧನ ಮತ್ತು ಯುದ್ಧದ ಭೀತಿಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ. ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದ್ದು, ವಿಶ್ವದ ರಾಷ್ಟ್ರಗಳು ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿವೆ.
ಚೀನಾ
ಹೊರ್ಮುಜ್ ಜಲಸಂಧಿಗೆ ಅಮೆರಿಕಾ ದಿಗ್ಬಂಧನ ವಿಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ಅತ್ಯಂತ ಅಪಾಯಕಾರಿ ನಡೆ ಎಂದು ಚೀನಾ ಹೇಳಿದೆ.








