ಅಂಬೇಡ್ಕರ್ ಆದರ್ಶಗಳ ಪಾಲನೆ ಅವಶ್ಯ : ತಹಶೀಲ್ದಾರ್ ಪ್ರದೀಪ್

ಮಹಾನ್‌ ಮಾನವತಾವಾದಿ – ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ

ಕಾರ್ಕಳ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಅಂಬೇಡ್ಕರ್‌ ಅವರ ವ್ಯಕ್ತಿತ್ವ, ಚಿಂತನೆ, ಆದರ್ಶ ಅನುಕರಣೀಯವಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್.‌ ಪ್ರತಿಪಾದಿಸಿದರು.
ಅವರು ಎ. 14ರಂದು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಬೆಟ್ಟುನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ ರಾಂ ಅವರ 119ನೇ ಜನ್ಮ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ರಾಷ್ಟ್ರದ ಆಸ್ತಿ. ಅವರು ಪಟ್ಟ ಕಷ್ಟಗಳು ಮತ್ತು ಪಡೆದ ಜ್ಞಾನ ಇಂದು ನಮಗೆ ಸಂವಿಧಾನದ ರೂಪದಲ್ಲಿ ರಕ್ಷಣೆ ನೀಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರಂತಹ ಮಹಾನ್ ಚೇತನಗಳ ಹಾದಿಯಲ್ಲಿ ನಡೆದರೆ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಹಾನ್‌ ಮಾನವತಾವಾದಿ ಡಾ. ಅಂಬೇಡ್ಕರ್ ಅವರು ಅಕ್ಷರ ಸಂಸ್ಕೃತಿಯ ಮೂಲಕ ಕ್ರಾಂತಿ ಮಾಡಿದವರು. ಸಮಾನತೆ, ಸಾಮಾಜಿಕ ಅಭಿವೃದ್ಧಿಯ ಹರಿಕಾರ ಅಂಬೇಡ್ಕರ್ ವಿಚಾರಧಾರೆಗಳು ಸಾಹಿತ್ಯ ಮತ್ತು ಜೀವನದ ಅವಿಭಾಜ್ಯ ಅಂಗವಾಗಬೇಕು.
ಕೊಂಡಳ್ಳಿ ಪ್ರಭಾಕರ್ ಶೆಟ್ಟಿ
ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್

ತಾ. ಪಂ. ಇಒ ಪ್ರಶಾಂತ್ ರಾವ್, ಬಿಇಒ ಗಿರಿಜಮ್ಮ, ನಿವೃತ್ತ ಸೈನಿಕ ಆನಂದ್‌ ಕಬ್ಬಿನಾಲೆ, ಎಸ್‌ಐ ಪ್ರಸನ್ನ ಎಂ.ಎಸ್.‌, ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ರಮೇಶ್ ಪೆರ್ವಾಜೆ, ಪ್ರಮುಖರಾದ ಅಣ್ಣಪ್ಪ ನಕ್ರೆ, ನ್ಯಾಯವಾದಿ ರಾಘವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖಾ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಿದರು.











































































error: Content is protected !!
Scroll to Top