ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾದಲ್ಲಿ ಕಳೆದ ಏಳು ವಾರಗಳಿಂದ ಭುಗಿಲೆದ್ದಿರುವ ಯುದ್ಧದ ಜ್ವಾಲೆಯನ್ನು ಶಮನಗೊಳಿಸಲು ಅಮೆರಿಕ ಈಗ ನಿರ್ಣಾಯಕ ರಾಜತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಳು ಅನಿರೀಕ್ಷಿತವಾಗಿ ವಿಫಲವಾದ ಬೆನ್ನಲ್ಲೇ ಮುಂದಿನ ಎರಡು ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಡೀ ಜಗತ್ತಿನ ಗಮನ ಈಗ ಪಾಕಿಸ್ತಾನದತ್ತ ನೆಟ್ಟಿದೆ.
ದೂರವಾಣಿ ಮೂಲಕ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್, ಸಂಧಾನದ ಸ್ಥಳದ ಕುರಿತಾದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆರಂಭದಲ್ಲಿ ಎರಡನೇ ಸುತ್ತಿನ ಸಭೆಯನ್ನು ಯುರೋಪ್ನ ಯಾವುದಾದರೂ ರಾಷ್ಟ್ರದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ ಟ್ರಂಪ್, ಮಾತುಕತೆಗೆ ಪಾಕಿಸ್ತಾನವೇ ಸೂಕ್ತ ಸ್ಥಳ ಎಂದು ಪ್ರತಿಪಾದಿಸಿದ್ದಾರೆ. ನಮಗೆ ಸಂಬಂಧವೇ ಇಲ್ಲದ ದೇಶಕ್ಕೆ ಹೋಗುವ ಬದಲು, ನಾವು ಇಸ್ಲಾಮಾಬಾದ್ಗೇ ಮರಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಮೇಲಿನ ತಮ್ಮ ರಾಜತಾಂತ್ರಿಕ ಒಲವನ್ನು ಅವರು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರ ಈ ದಿಢೀರ್ ನಿರ್ಧಾರದ ಹಿಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಕಾರ್ಯವೈಖರಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಮುನೀರ್ ಅವರನ್ನು ‘ಫೀಲ್ಡ್ ಮಾರ್ಷಲ್’ ಎಂದು ವಿಶೇಷವಾಗಿ ಸಂಬೋಧಿಸಿರುವ ಟ್ರಂಪ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುನೀರ್ ಅವರ ಮೇಲಿನ ವಿಶ್ವಾಸದಿಂದಲೇ ಶಾಂತಿ ಸ್ಥಾಪನೆಯ ಈ ಮಹತ್ವದ ಜವಾಬ್ದಾರಿಯನ್ನು ಮತ್ತೊಮ್ಮೆ ಪಾಕಿಸ್ತಾನದ ನೆಲದಲ್ಲಿಯೇ ಮುಂದುವರಿಸಲು ಅಮೆರಿಕ ಸಮ್ಮತಿಸಿದೆ ಎಂಬುದು ರಾಜತಾಂತ್ರಿಕ ವಲಯದ ವಿಶ್ಲೇಷಣೆಯಾಗಿದೆ.
ಕಳೆದ ಎರಡು ತಿಂಗಳಿಂದ ಇರಾನ್ ಹಾಗೂ ಅಮೆರಿಕ–ಇಸ್ರೇಲ್ ಜಂಟಿ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷವು ಅತೀ ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್ ನಾಯಕತ್ವದ ಮೇಲೆ ನಡೆದ ದಾಳಿಗಳಿಂದ ಉದ್ವಿಗ್ನತೆ ಮಿತಿಮೀರಿದ್ದು, ಈ ಯುದ್ಧವನ್ನು ಕೊನೆಗೊಳಿಸಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪಿಸುವುದೇ ಈ ಮಾತುಕತೆಯ ಮುಖ್ಯ ಅಜೆಂಡಾವಾಗಿದೆ. ಏಪ್ರಿಲ್ 10 ರಿಂದ 12 ರವರೆಗೆ ಇಸ್ಲಾಮಾಬಾದ್ನ ಸೆರೆನಾ ಹೋಟೆಲ್ನಲ್ಲಿ ನಡೆದ ಮೊದಲ ಸುತ್ತಿನ ಸಭೆಯು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿತ್ತು. ಹೀಗಾಗಿ, ಎರಡನೇ ಪ್ರಯತ್ನದಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಬರಲು ಉಭಯ ರಾಷ್ಟ್ರಗಳು ಉತ್ಸುಕವಾಗಿವೆ.































































