ಕಾರ್ಕಳ : ಅಜೆಕಾರಿನ ಪದ್ಮನಗರದ ಶಿಲಾಮಯ ಭವ್ಯ ಮಂದಿರದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠಾಪನೆಯಾಗಿದ್ದು, ಈ ದಿವ್ಯ ಸಾನಿಧ್ಯವು ಭಕ್ತರ ಮನ ಸೆಳೆಯತೊಡಗಿದೆ. ದಿನದ ಕಾರ್ಯಗಳೆಲ್ಲವೂ ನಿರ್ವಿಘ್ನವಾಗಿ ನಡೆಯಲಿ ಎಂದು ಮಹಾಗಣಪತಿಯಲ್ಲಿ ಪ್ರಾರ್ಥಿಸಿ ದಿನಚರಿ ಪ್ರಾರಂಭಿಸುವವರು ಇದ್ದಾರೆ. ಅಜೆಕಾರಿನ ಭಕ್ತ ಜನರು ಕೃತಾರ್ಥಗೊಂಡು ಪುನೀತರಾಗುತ್ತಿದ್ದಾರೆ.
ಭಕ್ತರ ಸಂಕಷ್ಟ ಹರಿಸುವ ಸನ್ನಿಧಿ
ಮಹಾಗಣಪತಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಶಿವರಾಮ ಜಿ. ಶೆಟ್ಟಿ ಅವರು ಹೇಳುವಂತೆ, ಅಜೆಕಾರು ಭಾಗದ ಭಕ್ತರಿಗೆ ಸಂಕಷ್ಟಹರ ಗಣಪತಿ ದೇವಸ್ಥಾನ ನಿರ್ಮಾಣಗೊಂಡಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ವಿಶೇಷವೆಂದರೆ ದಕ್ಷಿಣ ಕನ್ನಡದ ಪವಿತ್ರ ಕ್ಷೇತ್ರವಾದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗವಾಗಿ ಚಲಿಸುವುದರಿಂದ, ಮಾರ್ಗ ಮಧ್ಯೆ ಭಕ್ತಾದಿಗಳು ಮಹಾಗಣಪತಿ ದೇವರ ದರ್ಶನ ಪಡೆಯಲಿದ್ದಾರೆ ಎಂಬುದು ಅವರ ಅಭಿಪ್ರಾಯ.
ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಜ್ಞಾನದ ಪಸರಣ
ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪೂರ್ವಕ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯು ಭಕ್ತಿ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಶಿಕ್ಷಣವು ಜ್ಞಾನದ ಬೆಳಕು ನೀಡಿದರೆ, ದೇವಸ್ಥಾನವು ನಮ್ಮ ಅಂತರಂಗದ ಜ್ಯೋತಿಯನ್ನು ಬೆಳಗುತ್ತದೆ. ತನ್ನ ಹುಟ್ಟೂರಿನಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಜ್ಞಾನವನ್ನು ಪಸರಿಸುತ್ತಿರುವ ಡಾ. ಸುಧಾಕರ ಶೆಟ್ಟಿಯವರ ಕಾರ್ಯ ಶ್ಲಾಘನೀಯ. ಜ್ಞಾನ ಎನ್ನುವುದು ಅಮೃತವಿದ್ದಂತೆ. ಆಧ್ಯಾತ್ಮಿಕತೆಯ ಜೊತೆಗೆ ಸಾಮಾಜಿಕವಾಗಿ ಎತ್ತರಕ್ಕೇರಿದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ. ಇದುವೇ ಸನಾತನ ಧರ್ಮದ ಸಾರ ಎಂದು ನುಡಿದರು.
ಗ್ರಾಮಸ್ಥರಿಗಾಗಿ
ಅಜೆಕಾರು ಕಾಲೇಜು ಆವರಣದಲ್ಲಿ ಮಹಾಗಣಪತಿ ದೇವಸ್ಥಾನ ಮಾಡಲಾಗಿದ್ದರೂ ಇದು ಗ್ರಾಮಸ್ಥರಿಗಾಗಿಯೇ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರಿಗೆ ಬಿಟ್ಟುಕೊಡಲಾಗಿದೆ ಎಂದು ಡಾ. ಸುಧಾಕರ್ ಶೆಟ್ಟಿ ಪ್ರಾಸ್ತವಿಕ ಮಾತಿನಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಒಂದು ಮಹತ್ವದ ಕಿವಿಮಾತು ಹೇಳಿದ ಡಾ. ಸುಧಾಕರ್ ಶೆಟ್ಟಿ, ಎದೆಹಾಲು ಕೊಟ್ಟ ತಾಯಿಯನ್ನು, ಮಕ್ಕಳಿಗಾಗಿ ಜೀವವನ್ನೇ ಸವೆಯುವ ತಂದೆಯನ್ನು ಎಂದಿಗೂ ಮರೆಯಬೇಡಿ. ವಿದ್ಯೆ ಕಲಿಸಿದ ಗುರುವನ್ನು ಮತ್ತು ನಮ್ಮ ಹೆಮ್ಮೆಯ ದೇಶವನ್ನು ಸದಾ ಗೌರವಿಸಿ ಎಂದು ಭಾವುಕರಾಗಿ ನುಡಿದರು.
ಗಣ್ಯರ ಉಪಸ್ಥಿತಿ
ಈ ಪುಣ್ಯ ಕಾರ್ಯದ ಸಭಾ ಕಾರ್ಯಕ್ರಮದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಮತ್ತು ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿಗಳಾದ ಮಹೇಶ್ ಶೆಟ್ಟಿ ಕುಡುಪುಲಾಜೆ, ಶಶಿಧರ್ ಶೆಟ್ಟಿ ಬರೋಡಾ, ಶಕ್ತಿ ಕಾಲೇಜು ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್, ಜ್ಞಾನಾಮೃತ ಕಾಲೇಜಿನ ಅಧ್ಯಕ್ಷ ಎಂ.ಜಿ. ಗೌಡ್ ಬಳ್ಳಾರಿ, ಜಗದೀಶ್ ಕಾರಂತ, ಡಾ. ಸಂತೋಷ್ ಕುಮಾರ್ ಶೆಟ್ಟಿ, ಕಮಲಾಕ್ಷ ನಾಯಕ್, ಡಾ. ಎಸ್.ಎಂ. ಹೆಗ್ಡೆ ಉಪಸ್ಥಿತರಿದ್ದರು.
ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಇಸಿಒ ದಿನೇಶ್ ಕೊಡವೂರು, ಅಜೆಕಾರು ಪ್ರಾಂಶುಪಾಲ ಸಂತೋಷ್, ಉಪಪ್ರಾಂಶುಪಾಲ ಸಾಹಿತ್ಯ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಆಂಗ್ಲ ವಿಭಾಗದ ಮುಖಸ್ಥೆ ಸಂಗೀತಾ ಕುಲಾಲ್ ಬೋಳ ಸಹಕರಿಸಿದರು.























