ಪೋಪ್ ವಿರುದ್ಧ ಹೇಳಿಕೆ, ತನ್ನನ್ನೇ ಯೇಸುವಿಗೆ ಹೋಲಿಸಿಕೊಂಡ ಟ್ರಂಪ್‌:ಕ್ರೈಸ್ತ ಸಮುದಾಯದ ತೀವ್ರ ಆಕ್ರೋಶ



ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ಲಿಯೋ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವೇ ಯೇಸು ಕ್ರಿಸ್ತರಿಗೆ ಹೋಲಿಸಿಕೊಂಡು ಮಾಡಿಕೊಂಡಿರುವ ಪೋಸ್ಟ್ ಅಮೆರಿಕದ ಕ್ರೈಸ್ತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಟ್ರಂಪ್ ಅವರ ಈ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ.
​ವಿವಾದ ತಾರಕಕ್ಕೇರುತ್ತಿದ್ದಂತೆ ಟ್ರಂಪ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರಾದರೂ, ಕ್ರೈಸ್ತ ಮುಖಂಡರ ಆಕ್ರೋಶ ಮಾತ್ರ ಶಮನಗೊಂಡಿಲ್ಲ.
​ಕ್ಷಮೆಯಾಚನೆಗೆ ಒತ್ತಾಯ
​ಅಮೆರಿಕದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ (USCCB) ಅಧ್ಯಕ್ಷ ಆರ್ಚ್ ಬಿಷಪ್ ಪಾಲ್ ಕೋಕ್ಲಿ ಅವರು ಟ್ರಂಪ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಇದು ಅತ್ಯಂತ ಅವಮಾನಕರ ಸಂಗತಿ. ಇಂತಹ ಮಾತುಗಳು ಕ್ರೈಸ್ತ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ಟ್ರಂಪ್ ಅವರ ಈ ವರ್ತನೆಯಿಂದ ನಾನು ತೀವ್ರ ನಿರಾಶೆಗೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.
​ಮಿನ್ನೇಸೋಟ ಮೂಲದ ಬಿಷಪ್ ರಾಬರ್ಟ್ ಬ್ಯಾರನ್ ಕೂಡ ಟ್ರಂಪ್ ವಿರುದ್ಧ ಗುಡುಗಿದ್ದು, “ಅಧ್ಯಕ್ಷರ ಹೇಳಿಕೆಗಳು ಸಂಪೂರ್ಣವಾಗಿ ಅನುಚಿತ ಹಾಗೂ ಅಗೌರವಪೂರ್ಣವಾಗಿವೆ. ಅವರು ತಕ್ಷಣವೇ ಈ ಕುರಿತು ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ನೀವು ದೇವರಲ್ಲ: ಡೇವಿಡ್ ಬ್ರಾಡಿ
​ಕ್ರಿಶ್ಚಿಯನ್ ಬ್ರಾಡ್‌ಕಾಸ್ಟಿಂಗ್ ನೆಟ್‌ವರ್ಕ್‌ನ ಪ್ರಮುಖ ನಿರೂಪಕ ಡೇವಿಡ್ ಬ್ರಾಡಿ ಅವರು ‘X’ (ಹಿಂದಿನ ಟ್ವಿಟರ್) ತಾಣದಲ್ಲಿ ಪೋಸ್ಟ್ ಮಾಡಿ, “ಅಧ್ಯಕ್ಷರೇ, ಮೊದಲು ಆ ಪೋಸ್ಟ್ ಅನ್ನು ತೆಗೆದುಹಾಕಿ. ನೀವು ದೇವರಲ್ಲ, ನಮ್ಮಲ್ಲಿ ಯಾರೂ ದೇವರಲ್ಲ. ಇದು ಮಿತಿಯನ್ನು ಮೀರಿದ ವರ್ತನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಪರ ಸಮರ್ಥನೆ
​ಈ ವಿವಾದದ ನಡುವೆಯೂ ಶ್ವೇತಭವನದ ಸಲಹಾ ಮಂಡಳಿಯ ಸದಸ್ಯ ರಾಲ್ಫ್ ರೀಡ್ ಅವರು ಟ್ರಂಪ್ ಬೆನ್ನಿಗೆ ನಿಂತಿದ್ದಾರೆ. “ಅಧ್ಯಕ್ಷರ ಮೇಲಿರುವ ಜನರ ಆಳವಾದ ಬೆಂಬಲ ಇಂತಹ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ಕುಂದುವುದಿಲ್ಲ” ಎಂದು ಹೇಳುವ ಮೂಲಕ ಟ್ರಂಪ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿನ್ನೆಲೆ: 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಬಹುಪಾಲು ಕ್ಯಾಥೋಲಿಕ್ ಮತದಾರರು ಟ್ರಂಪ್ ಅವರನ್ನು ಬೆಂಬಲಿಸಿದ್ದರು. ಇದೀಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವುದು ಮುಂಬರುವ ದಿನಗಳಲ್ಲಿ ಅವರ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.















error: Content is protected !!
Scroll to Top