ಸಂಸತ್‌ ವಿಶೇಷ ಅಧಿವೇಶನ ಉದ್ದೇಶಿಸಿ ಪ್ರಧಾನಿ ಭಾಷಣ

ದೆಹಲಿ : ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಗುರುವಾರ ನಡೆದ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೊಸ ಮಸೂದೆಯಿಂದ ಭಾರತದ ರಾಜಕಾರಣದಲ್ಲಿ ಐತಿಹಾಸಿಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಆಧುನಿಕ ಭಾರತದ ಪಥವನ್ನು ನಿರ್ದೇಶಿಸಲಿವೆ ಎಂದರು.
ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್‌ ಮಸೂದೆ ಭಾರತದ ರಾಜಕಾರಣದ ದಿಕ್ಕನ್ನು ಬದಲಿಸಲಿದೆ. ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿ. ಕೇಂದ್ರ ಸರಕಾರ ಕಾಲದ ಕರೆಗೆ ಓಗೊಟ್ಟು, ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದೆ ಎಂದರು.

ವಿಕಸಿತ ಭಾರತ
ನಾವು ವಿಕಸಿತ ಭಾರತ ಕಲ್ಪನೆಯೊಂದಿಗೆ ಮುನ್ನುಗ್ಗುತ್ತಿದ್ದೇವೆ. ನಮ್ಮ ಗುರಿ ಸಾಧನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಹೀಗಾಗಿ ಪಕ್ಷ-ವಿಪಕ್ಷ ಎನ್ನದೇ ಸದನದ ಎಲ್ಲಾ ಸದಸ್ಯರು ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸೂಚಿಸಬೇಕು. ಮಹಿಳಾ ಮೀಸಲಾತಿಯನ್ನು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡಬಾರದು. ಇದನ್ನು ಮಹಿಳೆಯರಿಗೆ ದೊರೆಯಬೇಕಾದ ನ್ಯಾಯಯುತ ಹಕ್ಕು ಎಂದು ನಾವೆಲ್ಲಾ ಪರಿಗಣಿಸಬೇಕು. ಯಾವದೇ ಪಕ್ಷವಿರಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿ ಈ ಐತಿಹಾಸಿಕ ಅವಕಾಶವನ್ನು ಕೈಚೆಲ್ಲಬಾರದು ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.

ಮಹಿಳಾ ಮೀಸಲಾತಿ ಮಸೂದೆ ಪಾಸ್‌ ಮಾಡಿದ ಕ್ರೆಡಿಟ್‌ ನಮ್ಮ ಸರ್ಕಾರಕ್ಕೆ ಬೇಕಿಲ್ಲ. ವಿಪಕ್ಷಗಳು ಬಯಸಿದರೆ ಸರಕಾರಿ ಖರ್ಚಿನಲ್ಲಿ ಅವರ ಫೋಟೋ ಮಾಧ್ಯಮಗಳಲ್ಲಿ ಪ್ರಕಟಿಸಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಿದ ಕ್ರೆಡಿಟ್‌ ಅವರಿಗೇ ನೀಡಲಾಗುವುದು ಎಂದು ಮೋದಿ ಹಾಸ್ಯಚಟಾಕಿ ಹಾರಿಸಿದರು.

ಯಾವ ರಾಜ್ಯಕ್ಕೂ ತಾರತಮ್ಯವಾಗಲ್ಲ
ಕ್ಷೇತ್ರ ಮರುವಿಂಗಡಣೆ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ, ಇಂದು ಈ ಸದನದಿಂದ ನಾನು ಬಹಳ ಜವಾಬ್ದಾರಿಯುತವಾಗಿ ಹೇಳಬಯಸುತ್ತೇನೆ. ಕ್ಷೇತ್ರ ಪುನರ್‌ವಿಂಗಡಣೆ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಸಣ್ಣ ರಾಜ್ಯಗಳು ಅಥವಾ ದೊಡ್ಡ ರಾಜ್ಯಗಳು ಹೀಗೆ ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ ಅಥವಾ ಅನ್ಯಾಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.



















error: Content is protected !!
Scroll to Top