ನ್ಯಾಯಾಂಗ ಆಡಳಿತ ಸುಧಾರಣೆಯ ವಿಷಯದ ಕುರಿತು ಕಾನೂನು ಆಯೋಗದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡು ಭಾರತದಲ್ಲಿ ಕಾನೂನು ವೃತ್ತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರವು 1961ರ ವಕೀಲರ ಕಾಯ್ದೆಯನ್ನು 19-05-1961ರಂದು ದೇಶಾದ್ಯಂತ ಜ್ಯಾರಿಗೊಳಿಸಿರುತ್ತದೆ. ಈ ಕಾನೂನಿನ ಪ್ರಕಾರ ವಕೀಲರ ವೃತ್ತಿಯನ್ನು ನಿಯಂತ್ರಿಸಲು ರಾಷ್ಟ್ರ ಮಟ್ಟದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಬಾರ್ ಕೌನ್ಸಿಲ್‌ಗಳು ಕಾರ್ಯನಿರ್ವಹಿಸುತ್ತಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿಯೊಂದು ವಕೀಲರ ವೃತ್ತಿಪರ ನಡವಳಿಕೆ, ನೈತಿಕತೆ ಮತ್ತು ಕಾನೂನು ಶಿಕ್ಷಣದ ಮಾನದಂಡಗಳನ್ನು ನಿಗದಿಪಡಿಸುತ್ತದೆ ಹಾಗೂ ರಾಜ್ಯ ಬಾರ್ ಕೌನ್ಸಿಲ್‌ಗಳು ಪ್ರತಿ ರಾಜ್ಯದಲ್ಲಿ ವೃತ್ತಿ ನಿರತ ವಕೀಲರನ್ನು ನೋಂದಾಯಿಸಿಕೊಂಡು ಅವರ ಕಾರ್ಯಾಚರಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಈ ಕಾನೂನಿನ ಪ್ರಕಾರ ನೋಂದಾಯಿತ ವಕೀಲರು ಮಾತ್ರ ಸುಪ್ರೀಂ ಕೋರ್ಟ್ ಸೇರಿದಂತೆ ಯಾವುದೇ ನ್ಯಾಯಾಲಯ ಅಥವಾ ನ್ಯಾಯ ಮಂಡಳಿಯಲ್ಲಿ ಕಾನೂನು ವೃತ್ತಿಯನ್ನು ನಡೆಸಲು ಅರ್ಹತೆ ಹೊಂದಿರುತ್ತಾರೆ. ಈ ಕಾನೂನಿನ ನಿಯಾಮಾನುಸಾರದಂತೆ ಭಾರತ ದೇಶದಾದ್ಯಂತ ವಕೀಲರು ಏಕರೂಪದ ಹಕ್ಕು ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ವಕೀಲರು ತಮ್ಮ ಕರ್ತವ್ಯ ನಿರ್ವಹಿಸುವಾಗ ಬೆದರಿಕೆ ಕಿರುಕುಳ ಅಥವಾ ಹಿಂಸಾಚಾರವನ್ನು ನಿಷೇಧಿಸಿ ವಕೀಲರಿಗೆ ವೃತ್ತಿಪರ ಕಾರ್ಯಗಳನ್ನು ಮುಕ್ತವಾಗಿ, ನಿಷ್ಠೆಯಿಂದ ಮತ್ತು ನಿರ್ಭಯದಿಂದ ನಿರ್ವಹಿಸಲು ಅಗತ್ಯವುಳ್ಳ ಭದ್ರತೆಯನ್ನು ಖಚಿತಪಡಿಸಲು ಮತ್ತು ಕಿರುಕುಳ ಅಥವಾ ಹಲ್ಲೆ ನಡೆಸುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಎಂಬ ಕಾನೂನು ಇತ್ತೀಚೆಗೆ ಅಂದರೆ ಕಳೆದ ಮಾರ್ಚ್ 2024ರಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಜ್ಯಾರಿಯಲ್ಲಿರುತ್ತದೆ. ಈ ಕಾನೂನಿನ ಮುಖ್ಯ ಉದ್ದೇಶವು ವಕೀಲರ ವೃತ್ತಿಪರ ಸ್ವಾತಂತ್ರ ಮತ್ತು ಸುರಕ್ಷತೆಯನ್ನು ಕಾಪಾಡಿ ಸರಕಾರದಿಂದ ನೇಮಿಸಲ್ಪಡುವ ಪ್ರಾಧಿಕಾರದ ಮೂಲಕ ಸೂಕ್ತ ರಕ್ಷಣೆಯನ್ನು ಒದಗಿಸಿ ವಕೀಲರು ತಮ್ಮ ನೈತಿಕತೆ ಮತ್ತು ವೃತ್ತಿಪರ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ರಕ್ಷಣೆಯನ್ನು ನೀಡುವುದು ಆಗಿರುತ್ತದೆ.
ಈ ಕಾನೂನಿನ ಪ್ರಕಾರ ನ್ಯಾಯಾವಾದಿಗಳಿಗೆ ಸಂಬಂಧಿಸಿದ ಅಪರಾಧಗಳಿಗಾಗಿ ತಪ್ಪಿತಸ್ಥ ವ್ಯಕ್ತಿಯು ಮೂರು ತಿಂಗಳುಗಳಿಂದ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಗೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗಿನ ದಂಡನೆಗೆ ಅಥವಾ ಅವೆರಡಕ್ಕೂ ಗುರಿಯಾಗಬೇಕಾಗುತ್ತದೆ. ಈ ಮೇಲ್ಕಾಣಿಸಿದ ಕಾನೂನಿನಲ್ಲಿ ವಿವರಿಸಿದ ಅಪರಾಧವನ್ನು ಪ್ರಥಮ ದರ್ಜೆ ದಂಡಾಧಿಕಾರಿಯವರು ನಡೆಸಬೇಕಾಗಿರುತ್ತದೆ. ಈ ಕಾನೂನಿನ ಪ್ರಕಾರ ಪ್ರತಿಯೊಬ್ಬ ವಕೀಲರು ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಾಕ್ಷೇಪರಹಿತವಾಗಿ ತಮ್ಮ ಎಲ್ಲಾ ವೃತ್ತಿಪರ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದನ್ನು ಮತ್ತು ಅವರು ದೇಶ ವಿದೇಶ ಎರಡರಲ್ಲಿಯೂ ಮುಕ್ತವಾಗಿ ಪ್ರಯಾಣಿಸಲು ಮತ್ತು ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಸಾಧ್ಯವಾಗುವುದನ್ನು ಮತ್ತು ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು, ಮಾನಕಗಳು ಮತ್ತು ನೈತಿಕತೆಗಳ ಅನುಸಾರವಾಗಿ ತಮ್ಮ ವೃತ್ತಿಯನ್ನು ನಿರ್ಭಯದಿಂದ ಮತ್ತು ನಿಷ್ಠೆಯಿಂದ ನಡೆಸಬಹುದಾಗಿದೆ. ಯಾವುದೇ ಒಂದು ಸಂಜ್ಞೇಯ ಅಪರಾಧದ ಸಂಧರ್ಭದಲ್ಲಿ ನ್ಯಾಯವಾದಿಯನ್ನು ಬಂಧಿಸಿದಾಗ ಬಂಧನದ ಇಪ್ಪತ್ತ ನಾಲ್ಕು ಘಂಟೆಯ ಒಳಗಾಗಿ ಅಂತಹ ನ್ಯಾಯವಾದಿಯು ಸದಸ್ಯನಾಗಿರುವ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯವನ್ನು ಪೋಲೀಸರು ತಿಳಿಸಬೇಕಾಗುತ್ತದೆ. ವಕೀಲರ ಕಾಯ್ದೆ 1961 ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇದರ ನಿಯಮಗಳ ಪ್ರಕಾರ ವಕೀಲರು, ನ್ಯಾಯಾಲಯ, ಕಕ್ಷಿದಾರರು, ಎದುರಾಳಿ ವಕೀಲರು ಮತ್ತು ಸಮಾಜಕ್ಕೆ ವೃತ್ತಿಪರ ನೈತಿಕ ಕರ್ತವ್ಯಗಳನ್ನು ಹೊಂದಿರುತ್ತಾರೆ.

























