ಕಾರ್ಕಳ : ನಬಾರ್ಡ್ ಆಶ್ರಯದಲ್ಲಿ ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇದರ ಸಹಯೋಗದೊಂದಿಗೆ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಫೆ. 5ರಂದು ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆಯಿತು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಬಾರ್ಡ್ ಡಿಡಿಎಮ್ ಸಂಗೀತಾ ಕರ್ತ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಬಾರ್ಡ್ ವತಿಯಿಂದ ಮಹಿಳೆಯರಿಗೆ, ಕೃಷಿಕರಿಗೆ ಹಾಗೂ ಸ್ವ ಉದ್ಯೋಗಿಗಳಿಗೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಲೀಡ್ ಬ್ಯಾಂಕ್‌ನ LDCM ಹರೀಶ್ ಜಿ. ಬ್ಯಾಂಕ್‌ಗಳಲ್ಲಿ ಸಿಗುವ ಸಾಲ ಸೌಲಭ್ಯಗಳು ಹಾಗೂ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ವಿವರಿಸಿದರು. ಬ್ರಹ್ಮಾವರ ರುಡ್‌ಸೆಟ್ ನಿರ್ದೇಶಕ ಬೊಮ್ಮಾಯಿ, PMFME ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೆಂಕಟೇಶ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ಶ್ರೀಲತಾ ಸಂದರ್ಭೋಚಿತವಾಗಿ ಮಾತನಾಡಿ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ಆರ್ಥಿಕ ಸಬಲೀಕರಣಕ್ಕಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಬೇಕೆಂದರು. ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನುತ ಹಾಗೂ ಕಮಲಾಕ್ಷೀ ಶಿರ್ಲಾಲು ಪ್ರಾರ್ಥಿಸಿದರು. ಪ್ರದೀಪ್ ಅಂಡಾರು ಸ್ವಾಗತಿಸಿದರು. ಜಿಲ್ಲಾ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿ, ಕೆನರಾ ಬ್ಯಾಂಕಿನ FLC ಪ್ರದೀಪ್ ಕೆ. ವಂದಿಸಿದರು.





















