ಬಿಎಲ್‌ಒ ಆಗಿ ಶಿಕ್ಷಕರ ನೇಮಕ – ಸರಕಾರಿ ಶಾಲೆಗಳಿಗೆ ಮಾರಕ

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಾಗಿ ನೇಮಕಗೊಳಿಸಿರುವುದರಿಂದ ಶಿಕ್ಷಕರು ಇಡೀ ದಿನ ಚುನಾವಣಾ ಆಯೋಗದ ಕರ್ತವ್ಯದಲ್ಲೇ ಮಗ್ನರಾಗುತ್ತಿದ್ದು, ಇದು ಸರಕಾರಿ ಶಾಲಾ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೈಕ್ಷಣಿಕ ಕಾರ್ಯಗಳು ಕಡೆಗಣನೆಯಾಗುತ್ತಿದ್ದು ವಿದ್ಯಾರ್ಥಿಗಳ ಪ್ರಗತಿಗೆ ಅಡಚಣೆಯಾಗುತ್ತಿದೆ.

ಕೇಂದ್ರ ಚುನಾವಣಾ ಆಯೋಗ ಗ್ರೂಪ್‌ ಸಿ ವೃಂದದ ನೌಕರರನ್ನು ಬಿಎಲ್‌ಒ ಆಗಿ ನೇಮಕಗೊಳಿಸುವಂತೆ ನಿರ್ದೇಶವಿರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಮತದಾರರ ಚೀಟಿಯ ಭಾವಚಿತ್ರ ಬದಲಾವಣೆ, ಗುರುತಿನ ಚೀಟಿ ದಾಖಲಾತಿ ಕಾರ್ಯಗಳಿಗೆ ಶಿಕ್ಷಕರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡಿರುವುದರಿಂದ ಶಾಲಾ ಕರ್ತವ್ಯ ನಿರ್ವಹಿಸಲು ಶಿಕ್ಷಕರಿಗೆ ಅಡ್ಡಿಯಾಗುತ್ತಿರುವುದಲ್ಲದೇ ಶೈಕ್ಷಣಿಕ ಚಟುವಟಿಕೆ ಕುಂಠಿತವಾಗುತ್ತಿದೆ. ಸಾರ್ವಜನಿಕರು ಚುನಾವಣಾ ಚೀಟಿ ಸಂಬಂಧಿ ಕಾರ್ಯಗಳಿಗೆ ಶಾಲೆಗೆ ಭೇಟಿ ನೀಡುತ್ತಿರುವುದರಿಂದ ಬಿಎಲ್‌ಓ ಆಗಿ ನೇಮಕಗೊಂಡಿರುವ ಶಿಕ್ಷಕರು ಪಾಠ ಪ್ರವಚನಕ್ಕೆ ಸಮಯ ನೀಡಲು ಸಾಧ್ಯವಾಗದಂತಾಗಿದೆ.

ಒತ್ತಡದಲ್ಲಿ ಶಿಕ್ಷಕರು – ವರ್ಗಾವಣೆಯತ್ತ ಚಿತ್ತ
ಬಿಎಲ್‌ಒ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ. ಏಕೋಪಾಧ್ಯಾಯ, ನಿಯೋಜನೆ ಮೇರೆಗೆ ಎರಡೆರಡು ಶಾಲೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಶಿಕ್ಷಕರು, ಶಾಲೆಯಲ್ಲಿ ಮಾತ್ರವಲ್ಲದೇ ಮನೆಯಲ್ಲೂ ಚುನಾವಣಾ ಆಯೋಗದ್ದೇ ಕೆಲಸಗಳಿಗೆ ಹೈರಣಾದ ಶಿಕ್ಷಕರು ಈ ಕೆಲಸಗಳಿಂದ ಮುಕ್ತಿ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ವರ್ಗಾವಣೆ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಈ ಮೂಲಕ ಶಿಕ್ಷಕರು ಬಿಎಲ್‌ಒ ಶಿಕ್ಷೆಯಿಂದ ಬಿಡುಗಡೆಗೊಳ್ಳಲು ಹವಣಿಸುತ್ತಿದ್ದಾರೆ.

ಇಂಟರ್‌ ನೆಟ್‌ ಸಂಪರ್ಕ ಅವಶ್ಯ
ಬಹುತೇಕ ಸರಕಾರಿ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್‌ ಇಂಟರ್‌ ನೆಟ್‌ ಸಂಪರ್ಕವೂ ಇಲ್ಲ. ಹೀಗಾಗಿ ಬಿಎಲ್‌ಒ ಆಗಿ ನೇಮಕಗೊಂಡಿರುವ ಶಿಕ್ಷಕರು ತಮ್ಮ ತಮ್ಮ ಮೊಬೈಲ್‌ನಲ್ಲೇ ಫೋಟೋ ಮತ್ತಿತರ ದಾಖಲೆಯನ್ನು ಅಪ್‌ಲೋಡ್‌ ಮಾಡಲು ಹೆಣಗಾಡುತ್ತಿದ್ದಾರೆ. ಮೊಬೈಲ್‌ ನಲ್ಲಿ ಇಂಟರ್‌ ನೆಟ್‌ ಸ್ಲೋ, ಸರ್ವರ್‌ ಸ್ಲೋ ಕಾರಣದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರಿ ಶಾಲಾ ಅಭಿವೃದ್ಧಿ ಬಗ್ಗೆ ಮಾತನಾಡುವ ಸರಕಾರ ಡಿಜಿಟಲ್‌ ಯುಗದಲ್ಲಿ ಕನಿಷ್ಠ ಪಕ್ಷ ಒಂದು ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನೂ ಒದಗಿಸದೇ ಇರುವುದು ದುರಂತ.

ದಿನ ನಿಗದಿ ಸೂಕ್ತ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಎಲ್‌ಒ ಕರ್ತವ್ಯಕ್ಕೆ ಒಂದು ದಿನ ನಿಗದಿಗೊಳಿಸುವುದು ಉತ್ತಮ. ವಾರದಲ್ಲಿ ಒಂದು ದಿನ ಬಿಎಲ್‌ಒ ಕರ್ತವ್ಯ ಎಂದು ನಿಗದಿಪಡಿಸಿದರೆ ಅದೇ ದಿನ ಸಾರ್ವಜನಿಕರು ಶಾಲೆಗೆ ಬರುವಂತಾಗಲಿದೆ. ಶಿಕ್ಷಕರ ಮೂಲ ವೃತ್ತಿ ಕಡೆಗಣನೆ ಆಗದೇ ಶೈಕ್ಷಣಿಕ ಪ್ರಗತಿಗೆ ತೊಡಕಾಗುವುದು ತಪ್ಪಲಿದೆ. ಕಳೆದ ಜೂನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರು ಬಿಎಲ್‌ಒ ಆಗಿ ನೇಮಕಗೊಂಡಿದ್ದು, ಅದರಿಂದ ಮುಕ್ತಿ ಪಡೆಯಲು ಶಿಕ್ಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕ್ಲರ್ಕ್‌ ನೇಮಕವಾಗಲಿ
ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹಶಿಕ್ಷಕರಿಗೆ ಅಕ್ಷರ ದಾಸೋಹದ ಲೆಕ್ಕ ಬರೆಯುವುದು, ಬಿಸಿ ಊಟಕ್ಕೆ ಸಾಮಗ್ರಿ, ಮೊಟ್ಟೆಗೆ ಹಣ ಹೊಂದಿಸುವುದು, ಮೀಟಿಂಗ್‌ ಮತ್ತೊಂದು – ಮಗದೊಂದು ಎಂದು ಪಾಠ ಮಾಡುವುದಕ್ಕಿಂತ ಉಳಿದ ಕೆಲಸ, ಜವಾಬ್ದಾರಿಯೇ ಹೆಚ್ಚಿರುವುದು. ಸರಕಾರ ಒಂದು ಕ್ಲರ್ಕ್‌ ಹುದ್ದೆಯನ್ನು ಕಲ್ಪಿಸಿದಲ್ಲಿ ಈ ಎಲ್ಲ ಒತ್ತಡಗಳಿಂದ ಮುಕ್ತಿಗೊಂಡು ಶಿಕ್ಷಕರು ಪಾಠ, ಪ್ರವಚನದತ್ತ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗಲಿದೆ. ಹೀಗಾಗಿ ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಿಗೆ ಓರ್ವ ಕ್ಲರ್ಕ್‌ ನೇಮಕ ಮಾಡುವತ್ತ ಸರಕಾರ ಅಗತ್ಯ ಕ್ರಮ ವಹಿಸುವುದು ಸೂಕ್ತ







































































































error: Content is protected !!
Scroll to Top